ಕುಲ್ಗಾಮ್ ಎನ್​ಕೌಂಟರ್​​; ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ 6 ಭಯೋತ್ಪಾದಕರು ಹತ

Untitled-design-2024-07-07T155625.821
Published on

ಜಮ್ಮುಕಾಶ್ಮೀರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಎರಡು ವಿಭಿನ್ನ ಸ್ಥಳಗಳಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದಿದೆ. ಭದ್ರತಾ ಪಡೆಗಳು ಭಾನುವಾರ (ಜುಲೈ 7) ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ಶನಿವಾರ ನಾಲ್ವರು ಉಗ್ರರನ್ನು ಎನ್​​ಕೌಂಟರ್​ ಮಾಡಿದ್ದರು. ಕುಲ್ಗಾಮ್‌ನಲ್ಲಿ ಇದುವರೆಗೆ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಇಬ್ಬರು ಭಯೋತ್ಪಾದಕರ ಶವಗಳನ್ನು ಮೊದರ್ಗಾಮ್ ಎನ್​​ಕೌಂಟರ್​​ ಸೈಟ್​​ನಿಂದ ಹಾಗೂ ನಾಲ್ಕು ಭಯೋತ್ಪಾದಕರ ದೇಹಗಳನ್ನು ಚಿನ್ನಿಗಮ್ ಸೈಟ್​​ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಒಬ್ಬರು ಪ್ಯಾರಾ ಕಮಾಂಡೋ ಸೇರಿದಂತೆ ಇಬ್ಬರು ಸೇನಾ ಯೋಧರು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದಾರೆ ಎಂದು ಅವರು ತಿಳಿಸಿದರು.

ಉಗ್ರಗಾಮಿ ವಿರೋಧಿ ಕಾರ್ಯಾಚರಣೆಗಳು ವೇಗವನ್ನು ಪಡೆಯುತ್ತಿವೆ. ಇದು ನಿಸ್ಸಂದೇಹವಾಗಿ ಭದ್ರತಾ ಪಡೆಗಳಿಗೆ ಮಹತ್ವದ ಮೈಲಿಗಲ್ಲಾಗಿದೆ. ಭದ್ರತಾ ವಾತಾವರಣವನ್ನು ಬಲಪಡಿಸುವಲ್ಲಿ ಈ ಯಶಸ್ಸುಗಳು ನಿರ್ಣಾಯಕವಾಗಿವೆ. ಜನರು ಭಯೋತ್ಪಾದನೆಯನ್ನು ಕೊನೆಗೊಳಿಸಲು ಒಗ್ಗೂಡುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯು ಇನ್ನೂ ನಡೆಯುತ್ತಿದೆ ಮುಕ್ತಾಯಗೊಂಡಿಲ್ಲ ಎಂದು ಮಾಹಿತಿ ನೀಡಿದರು.

ಎನ್‌ಕೌಂಟರ್ ಸ್ಥಳದಲ್ಲಿ ಉಗ್ರರ ಮೃತದೇಹಗಳು ಬಿದ್ದಿವೆ. ಡ್ರೋನ್​ ಮೂಲಕ ಅವರ ಮೃತದೇಹಗಳನ್ನು ನೋಡಲಾಯಿತು. ಬಳಿಕ ಅವರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ ಅವರ ಬಳಿಯಿದ್ದ ಮೂರು ಎಕೆ 47 ಮತ್ತು ಒಂದು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕರು ಹಿಜ್ಬುಲ್ ಮುಜಾಹಿದ್ದೀನ್‌ನ ಬಣವಾದ ಟಿಆರ್‌ಎಫ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಮೂಲಗಳಿಂದ ತಿಳಿದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net