

ಉಡುಪಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿನ ವರ್ಷದ ಆದಾಯ 98.92 ಕೋಟಿ ರೂ. ರಾಜ್ಯದಲ್ಲೇ ಗರಿಷ್ಠ ಪ್ರಮಾಣದ ಆದಾಯ ಹೊಂದಿ ರುವ ಖ್ಯಾತಿ ಈ ದೇವಳಕ್ಕಿದೆ. ಆದರೆ ದೇವಸ್ಥಾನದ ಅರ್ಚಕರ ಮೂಲ ವೇತನ ಮಾತ್ರ 96 ರೂ. ಆಶ್ಚರ್ಯವಾದರೂ ಇದು ಸತ್ಯ.
ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಲ್ವರು ಅರ್ಚಕರು, ಓರ್ವ ಸಹಾಯಕ ಅರ್ಚಕ, ಪುರೋಹಿತರು, ಪರಿಚಾರಕರು ಸೇರಿ 15 ಸಿಬ್ಬಂದಿಗೆ ಆಯಾ ತಿಂಗಳಲ್ಲಿ ಭಕ್ತರಿಂದ ನೆರವೇರುವ ಸೇವೆಗಳ ಆಧಾರದಲ್ಲಿ ಸೇವಾ ಕಮೀಷನ್ ನೀಡಲಾಗುತ್ತದೆ. ಅದರಂತೆ ಮಾರ್ಚ್ 17ರ ವರೆಗಿನ ಭಕ್ತರ ಸೇವೆಗಳಿಗೆ ಅನುಗುಣವಾಗಿ ಸೇವಾ ಭತ್ಯೆ ಪಾವತಿಸಲಾಗಿದೆ. ಆದರೆ, ಕರೊನಾ ಕಾರಣ ಸರ್ಕಾರದ ಆದೇಶದಂತೆ ಲಾಕ್ಡೌನ್ ಜಾರಿಯಾಗಿರುವುದರಿಂದ ದೇವಸ್ಥಾನದಲ್ಲಿ ಮಾ.20ರಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇದೀಗ ದೇವರ ಪೂಜೆ ಹಾಗೂ ಪಂಚಪರ್ವಾದಿ ಉತ್ಸವ ನೆರವೇರಿಸುವ ಅರ್ಚಕರಿಗೆ ಸಂಬಳ ರೂಪದಲ್ಲಿ ಮಾಸಿಕ 96 ರೂ. ಮಾತ್ರ ನೀಡಲಾಗಿದೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿರುವ ಅರ್ಚಕರು, ಕೆಲ ದೇವಸ್ಥಾನಗಳಲ್ಲಿ 2019ರ ಏಪ್ರಿಲ್ ಮತ್ತು ಮೇನಲ್ಲಿ ಪಾವತಿಸಿದಷ್ಟು ಸೇವಾ ಭತ್ಯೆ ಹಾಗೂ ದಕ್ಷಿಣೆಯನ್ನು ಈ ವರ್ಷವೂ ನೀಡಿದ್ದಾರೆ. ಇದನ್ನು ಕುಕ್ಕೆ ದೇವಸ್ಥಾನಕ್ಕೂ ವಿಸ್ತರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅರ್ಚಕರ ಮನವಿ ಹಿನ್ನೆಲೆಯಲ್ಲಿ ಮೇ 22ರಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಹಿಂದು ಧಾರ್ವಿುಕ ಸಂಸ್ಥೆ ಮತ್ತು ಧರ್ವದಾಯ ದತ್ತಿ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದೆ. 2019-20ನೇ ಸಾಲಿನಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪಾವತಿಯಾದಂತೆ 2020ರ ಏಪ್ರಿಲ್ ತಿಂಗಳ ಮೊತ್ತ 4,21,365 ಹಾಗೂ ಮೇ ತಿಂಗಳ ಮೊತ್ತ 5,19,324 ರೂ. ಪಾವತಿಸುವ ಬಗ್ಗೆ ಸೂಕ್ತ ಆದೇಶ ನೀಡುವಂತೆ ಕೋರಿದ್ದಾರೆ. ಆದರೆ ಪ್ರಸ್ತಾವನೆ ಸಲ್ಲಿಸಿ 2 ತಿಂಗಳಾದರೂ ಸರ್ಕಾರದಿಂದ ನಿರ್ದೇಶನ ಬಂದಿಲ್ಲ.
ವಿಶೇಷ ಭತ್ಯೆ ನೀಡುವಂತೆ ಅರ್ಚಕರಿಂದ ಮನವಿ ಬಂದಿದೆ. ಅದನ್ನು ರಾಜ್ಯ ದತ್ತಿ ಇಲಾಖೆ ಆಯುಕ್ತರಿಗೆ ಕಳುಹಿಸಿಕೊಟ್ಟಿದ್ದೇನೆ. ಅವರ ನಿರ್ದೇಶನ ಪಾಲಿಸಲಾಗುವುದು. | ರೂಪಾ ದೇವಸ್ಥಾನದ ಆಡಳಿತಾಧಿಕಾರಿಹಾಗೂ ಅಪರ ಜಿಲ್ಲಾಧಿಕಾರಿ, ದ.ಕ. ಜಿಲ್ಲೆ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಸೇವೆ ನಡೆಸುತ್ತಿದ್ದ ಪುರೋಹಿತರಿಗೆ ತಾತ್ಕಾಲಿಕ ನೆಲೆಯಲ್ಲಿ 5 ಸಾವಿರ ರೂ. ಸಹಾಯಧನ ಪಾವತಿಸಲಾಗಿದೆ. ಅರ್ಚಕರ ಮನವಿ ಬಗ್ಗೆ ಗೊತ್ತಿಲ್ಲ. ಯಾರು ತೊಂದರೆ ಯಲ್ಲಿದ್ದರೂ ಸರ್ಕಾರ ನೆರವು ನೀಡಲು ಸಿದ್ಧ. | ಕೋಟ ಶ್ರೀನಿವಾಸ ಪೂಜಾರಿ ಸಚಿವ https://www.vijayavani.net/rich-countries-lock-up-covid-vaccines-supplies/