

KTK Controversy: 2011ರಲ್ಲಿ ಐಪಿಎಲ್ ಭಾಗವಾಗಿದ್ದ ಕೋಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ, ಕೇವಲ ಒಂದೇ ವರ್ಷಕ್ಕೆ ಬಿಸಿಸಿಐ ಆದೇಶಕ್ಕೆ ತಲೆಬಾಗಿ ಲೀಗ್ನಿಂದ ಹೊರಗುಳಿಯಿತು. ಅಂದಿನಿಂದ ಇಂದಿನವರೆಗೂ ಈ ವಿವಾದ ಬಿಸಿಸಿಐ ಮತ್ತು ಫ್ರಾಂಚೈಸಿ ನಡುವೆ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಈ ವಿಚಾರ ಮತ್ತೇ ಮುನ್ನೆಲೆಗೆ ಬಂದಿದ್ದು, ಐಪಿಎಲ್ನಿಂದ ಕಿತ್ತುಬಿಸಾಡಲಾದ ಕೆಟಿಕೆ ಫ್ರಾಂಚೈಸಿ ತನ್ನ ಪ್ರಮುಖ ಆಟಗಾರರ ಸಂಭಾವನೆಯನ್ನು ಇಂದಿಗೂ ಬಾಕಿ ಉಳಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.
ಒಪ್ಪಂದ ಉಲ್ಲಂಘನೆ ಆರೋಪದ ಅಡಿಯಲ್ಲಿ ಕೇರಳದ ಐಪಿಎಲ್ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಅನ್ನು 2011ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ನಿಂದ ಹೊರದಬ್ಬಿತು. ಇದರ ವಿರುದ್ಧ ಫ್ರಾಂಚೈಸಿಯ ದಶಕದ ಕಾನೂನು ಹೋರಾಟಕ್ಕೆ ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ ನಿರ್ಣಾಯಕ ತೀರ್ಪು ನೀಡಿದ್ದು, 538 ಕೋಟಿ ರೂ. ಪರಿಹಾರ ಪಾವತಿಸಲು ಬಿಸಿಸಿಐಗೆ ಆದೇಶಿಸಿದೆ. ಇದು ಬೂದಿ ಮುಚ್ಚಿದ ಕೆಂಡದಂತಿದ್ದ ವಿವಾದವನ್ನು ಹೊಗೆಯಾಡುವಂತೆ ಮಾಡಿದೆ.
2010ರಲ್ಲಿ ಅಸ್ತಿತ್ವಕ್ಕೆ ಬಂದ ಕೇರಳ ಟಸ್ಕರ್ಸ್ ಫ್ರಾಂಚೈಸಿ ಆ ವರ್ಷ ಐಪಿಎಲ್ ಆಡಿತು. ಇದಾದ ಒಂದು ವರ್ಷದಲ್ಲಿ ಬಿಸಿಸಿಐ ಅವರ ಒಪ್ಪಂದವನ್ನು ರದ್ದುಗೊಳಿಸಿತು. ಅದಕ್ಕೆ ಕಾರಣ ಐಪಿಎಲ್ ಫ್ರಾಂಚೈಸಿ ನಿಯಮವನ್ನು ಉಲ್ಲಂಘಿಸಿದ್ದು. ಆ ನಿಯಮ ಏನೆಂದರೆ, ಫ್ರ್ಯಾಂಚೈಸಿ ಶುಲ್ಕದ ಶೇ.10ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಬೇಕಿತ್ತು. ಅಂದರೆ, 153 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ನೀಡಬೇಕಿತ್ತು. ಆರು ತಿಂಗಳೊಳಗೆ ಹೊಸ ಗ್ಯಾರಂಟಿ ನೀಡುವಂತೆ ಕೇಳಿತು. ಆದರೆ, ನುಡಿದಂತೆ ನಡೆಯುವಲ್ಲಿ ಫ್ರಾಂಚೈಸಿ ವಿಫಲವಾಯಿತು. ಇದು ವಿವಾದಕ್ಕೆ ಕಾರಣವಾಯಿತು.
ಬಿಸಿಸಿಐ ಮತ್ತು ಕೊಚ್ಚಿ ಟಸ್ಕರ್ಸ್ ನಡುವಿನ ವಿವಾದ ನಡುವೆ ಮತ್ತೊಂದು ಶಾಕಿಂಗ್ ವಿಚಾರವೊಂದು ಹೊರಬಿದ್ದಿದ್ದು, ಅಂದು ತನ್ನ ಫ್ರಾಂಚೈಸಿಯಲ್ಲಿ ಆಡಿದ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್, ರವೀಂದ್ರ ಜಡೇಜಾ, ಸ್ಟೀವ್ ಸ್ಮಿತ್ ಸೇರಿದಂತೆ ಇನ್ನು ಹಲವರೊಂದಿಗೆ ಮಾತುಕತೆ ಮಾಡಿಕೊಂಡಿದ್ದ ಸಂಭಾವನೆಯ ಮೂರನೇ ಕಂತನ್ನು ನೀಡುವಲ್ಲಿ ಫ್ರಾಂಚೈಸಿ ವಿಫಲವಾಗಿದೆ. ಸಂಭಾವನೆಯ ಶೇ.35ರಷ್ಟು ಹಣವನ್ನು ಇನ್ನೂ ಬಾಕಿ ಉಳಿಸಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಕೊಚ್ಚಿ ಫ್ರಾಂಚೈಸಿ ತಂಡಕ್ಕೆ ಕ್ಯಾಪ್ಟನ್ ಆಗಿದ್ದ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮಹೇಲ ಜಯವರ್ಧನೆ, ಅಂದು ತಂಡದ ಅತ್ಯಂತ ದುಬಾರಿ ಮೊತ್ತಕ್ಕೆ (6.80 ಕೋಟಿ ರೂ.) ಸಹಿ ಹಾಕಿದ್ದರು. ವರ್ಷಗಳಲ್ಲಿ ಸಂಗ್ರಹವಾದ ಬಡ್ಡಿಯನ್ನು ಹೊರತುಪಡಿಸಿ ಇನ್ನೂ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿಯಿದೆ ಎಂದು ವರದಿಯಾಗಿದೆ. ಈ ಸಾಲಿನಲ್ಲಿ ಪ್ರಸ್ತುತ ಇಂಗ್ಲೆಂಡ್‌ನ ಮುಖ್ಯ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ಕೂಡ ಇದ್ದಾರೆ. ಅವರಿಗೆ ಫ್ರಾಂಚೈಸಿ ಸುಮಾರು 75 ಲಕ್ಷ ರೂ.ಗಳ ಹಣವನ್ನು ಕೊಡಬೇಕಿದೆ. ರವೀಂದ್ರ ಜಡೇಜಾ, ವಿವಿಎಸ್ ಲಕ್ಷ್ಮಣ್, ಸ್ಟೀವ್ ಸ್ಮಿತ್, ಎಸ್. ಶ್ರೀಶಾಂತ್, ರೈಫಿ ವಿನ್ಸೆಂಟ್, ಪ್ರಶಾಂತ್ ಪದ್ಮನಾಭನ್ ಮತ್ತು ಪ್ರಶಾಂತ್ ಪರಮೇಶ್ವರನ್ ಸೇರಿದಂತೆ ಹಲವರು ಇಂದಿಗೂ ಸಂಭಾವನೆ ಪಾಲನ್ನು ಪಡೆದಿಲ್ಲ,(ಏಜೆನ್ಸೀಸ್).