

ಬೆಂಗಳೂರು: ವಿದ್ಯಾರ್ಥಿಗಳು ಸಾರಿಗೆ ಬಸ್ಗಾಗಿ ಕಾಯುತ್ತಿದ್ದರೂ ಬಸ್ ನಿಲ್ಲಿಸದೆ ಕೆಲ ಚಾಲಕರು ಮತ್ತು ನಿರ್ವಾಹಕರು ಉದ್ಧಟತನ ತೋರುತ್ತಿದ್ದು, ಬಸ್ಪಾಸ್ವುಳ್ಳ ಮಕ್ಕಳಾದಿಯಾಗಿ ಬಹುತೇಕರು ನಿತ್ಯ ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಈ ವರ್ತನೆಗೆ ಬೇಸತ್ತ ವಿದ್ಯಾರ್ಥಿಗಳು ಆಗಾಗ್ಗೆ ಪ್ರತಿಭಟನೆ ನಡೆಸಿರುವ ಪ್ರಕರಣಗಳು ಸಾಕಷ್ಟಿದೆ. ಆದರೂ ಕೆಲವೆಡೆ ಈ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಇದನ್ನು ಇತ್ತೀಚಿಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಖುದ್ದಾಗಿ ಕಂಡಿದ್ದು, ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಮುಂದೆ ಸಾಗಿದ ಬಸ್ ಅನ್ನು ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕರಿಗೆ ನಡುರಸ್ತೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು.
ಇದೀಗ ಈ ಘಟನೆ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೊರಟು ನಿಂತಾಗ ರಾಜ್ಯದ ವಿವಿಧೆಡೆಯ ಗ್ರಾಮಾಂತರ ಪ್ರದೇಶಗಳ ಅನೇಕ ಬಸ್ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸದೆ ಕೆಎಸ್ಆರ್ಟಿಸಿ ಬಸ್ಗಳ ಕೆಲ ಚಾಲಕರು /ನಿರ್ವಾಹಕರು ವಿದ್ಯಾರ್ಥಿಗಳ ಕುರಿತು ಅವಜ್ಞೆ ತೋರುತ್ತಿದ್ದಾರೆ. ನಾನು ಕಳೆದ ಶನಿವಾರ ತುಮಕೂರು ಜಿಲ್ಲೆಯ ಪ್ರವಾಸದಲ್ಲಿರುವಾಗ ಪಿನಗಾನಹಳ್ಳಿ ಮಾರ್ಗದ ಬಸ್ವೊಂದು ಕಡ್ಡಾಯ ನಿಲುಗಡೆ ಸ್ಥಳದಲ್ಲೂ ನಿಲ್ಲಿಸದೆ ಮುಂದೆ ಸಾಗಿತು. ಇದರಿಂದ ಅಲ್ಲೇ ಕಾಯುತ್ತಿದ್ದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದ್ದು ನನ್ನ ಗಮನಕ್ಕೆ ಬಂತು. ಆ ಬಸ್ ಚಾಲಕ/ನಿರ್ವಾಹಕರಿಗೆ ಬಸ್ ನಿಲ್ಲಿಸದಿದ್ದರೆ ಮಕ್ಕಳಿಗೆ ಆಗುವ ತೊಂದರೆ ಕುರಿತು ಮನದಟ್ಟು ಮಾಡಿದೆ' ಎಂದು ವಿವರಿಸಿದ್ದಾರೆ. ಇದನ್ನೂ ಓದಿರಿ ರಾಮನಗರ ಎಸಿಯಿಂದ ನನಗೆ ಬರೋಬ್ಬರಿ 3 ಕೋಟಿ ರೂ. ಆಫರ್ ಬಂದಿತ್ತು… ಗಂಭೀರ ಆರೋಪ ಮಾಡಿದ ಎಚ್ಡಿಕೆ
'ವಿದ್ಯಾರ್ಥಿಗಳನ್ನು ಬಸ್ ಚಾಲಕ/ನಿರ್ವಾಹಕರು ಅವಜ್ಞೆ ಮಾಡದೆ ಮತ್ತು ಮಕ್ಕಳು ಶಾಲಾ-ಕಾಲೇಜಿಗೆ ಹೋಗಿ ಬರಲು ತೊಂದರೆಯಾಗದಂತೆ ಸಹಾನುಭೂತಿಯಿಂದ ವರ್ತಿಸುವಂತೆ ಚಾಲಕ/ನಿರ್ವಾಹಕರಿಗೆ ನಿರ್ದೇಶನ ನೀಡಬೇಕು' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿಗೆ ಲಕ್ಷ್ಮಣ ಸವದಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.