

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಸರಗೋಡು ಜಿಲ್ಲೆಯ ನಾನಾ ಕಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.
ಮೊಸರುಕುಡಿಕೆ, ಶ್ರೀಕೃಷ್ಣ ವೇಷ ಸ್ಪರ್ಧೆ, ವಿವಿಧ ಕಲಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಮಹೇಶ್ವರಿ ಮಹಿಳಾ ಸಮಾಜ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಪುಟಾಣಿಗಳಿಗಾಗಿ ಶ್ರೀಕೃಷ್ಣ ವೇಷ ಸ್ಪರ್ಧೆ ಜರುಗಿತು.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಅರ್ಚಕ ಚಂದ್ರಶೇಖರ ನಾವಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ, ಮಧ್ಯಾಹ್ನ 5ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೇಂಗಪದವು ಶ್ರೀ ಗಿರಿಜಾಂಬಾ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೆ.ಶಿವಕುಮಾರ್ ಧಾರ್ಮಿಕ ಭಾಷಣ ಮಾಡಿದರು. ಕ್ಲಬ್ ಅಧ್ಯಕ್ಷ ಚಂದ್ರಶೇಖರ ಅಮೆಕ್ಕಳ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಪಂ ಸದಸ್ಯೆ ಉಷಾ ಗಣೇಶ್ ಬಹುಮಾನ ವಿತರಿಸಿದರು. ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಮಹೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ರಾಧಾ ರೈ ಬಜಕೂಡ್ಲು ಉಪಸ್ಥಿತರಿದ್ದರು.
ಮುಳ್ಳೇರಿಯ ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮಂಜೇಶ್ವರ ಮೊರತ್ತಣೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ 46ನೇ ವರ್ಷದ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ನಡೆಯಿತು. ಆನೆಕಲ್ಲು ಶ್ರೀ ಸಂತಾನಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ, ಮುದ್ದುಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.
ಪಾವೂರಿನಲ್ಲಿ ಮೊಸರು ಕುಡಿಕೆ
ಪಾವೂರು ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಬಜಾಲ್ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಪಾವೂರು ಆಶ್ರಯದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು. ಬೆಳಗ್ಗೆ ಮೊಸರು ಕುಡಿಕೆ ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಕೆದುಂಬಾಡಿ ಉದ್ಘಾಟಿಸಿದರು. ನಂತರ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.