ಸೆ.6,7ರಂದು ನಡೆಯಬೇಕಿದ್ದ ಕೃಷಿ ಅಧಿಕಾರಿ ಪರೀಕ್ಷೆ ರದ್ದುಗೊಳಿಸಿದ ಕೆಪಿಎಸ್‌ಸಿ

KPSC
Published on

ಬೆಂಗಳೂರು: ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ (ಕಲ್ಯಾಣ ಕರ್ನಾಟಕ) ಸೆ.6 ಮತ್ತು 7ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ರದ್ದುಪಡಿಸಿದೆ.

ಪರಿಶಿಷ್ಟ ಜಾತಿ ಒಳ ಮೀಸಲಾತಿ ರೋಸ್ಟರ್ ಅನ್ವಯವೇ ವಿವಿಧ ಇಲಾಖೆಗಳ ನೇಮಕ ಪ್ರಕ್ರಿಯೆಯನ್ನು ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಭಾನುವಾರ ನಿಗದಿಯಾಗಿದ್ದ ಸಾಮಾನ್ಯ ಪತ್ರಿಕೆ-1 ಮತ್ತು 2ರ ಪರೀಕ್ಷೆಯನ್ನು ಕೊನೇ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಪ್ರವೇಶ ಪತ್ರಗಳನ್ನು ಈಗಾಗಲೇ ಡೌನ್‌ಲೋಡ್ ಮಾಡಿಕೊಳ್ಳಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ, ಸರ್ಕಾರದ ಹಂತದಲ್ಲಿ ಗುರುವಾರ ನಿರ್ಧಾರವಾಗಿದ್ದರಿಂದ ಬದಲಾವಣೆ ಮಾಡಲಾಗಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ವಿಶಾಲ್ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ವಿಭಾಗದ 42 ಕೃಷಿ ಅಧಿಕಾರಿ ಮತ್ತು 231 ಸಹಾಯಕ ಕೃಷಿ ಅಧಿಕಾರಿ, ಇತರೆ ಜಿಲ್ಲೆಗಳ 86 ಕೃಷಿ ಅಧಿಕಾರಿ ಹಾಗೂ 586 ಸಹಾಯಕ ಕೃಷಿ ಅಧಿಕಾರಿ ಹುದ್ದೆ ಸೇರಿ ಒಟ್ಟು 945 ಹುದ್ದೆಗಳನ್ನು ತುಂಬಲು 2024ರ ಸೆಪ್ಟಂಬರ್‌ನಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಪ್ರಕಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net