

ಬೆಂಗಳೂರು: ‘ಲವ್ 360’ ಬಳಿಕ ನಿರ್ದೇಶಕ ಶಶಾಂಕ್ ಪ್ರಾರಂಭಿಸಿರುವ ಹೊಸ ಚಿತ್ರ ‘ಕೌಸಲ್ಯಾ ಸುಪ್ರಜಾ ರಾಮ’. ಇತ್ತೀಚೆಗಷ್ಟೇ ವಿಭಿನ್ನ ವಿಡಿಯೋ ಮೂಲಕ ಶಶಾಂಕ್ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಿದರು. ಪ್ರತಿದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲನ್ನೇ ಟೈಟಲ್ ಮಾಡಿಕೊಂಡಿರುವ ಕುರಿತು ನಿರ್ದೇಶಕ ಶಶಾಂಕ್, ‘ಇದೊಂದು ತಾಯಿ ಮಗನ ಭಾವನಾತ್ಮಕ ಚಿತ್ರ. ಹಾಗಂತ ಇಲ್ಲಿ ಮನರಂಜನೆಗೂ ಕೊರತೆಯಿಲ್ಲ. ಮನರಂಜನೆ, ಸೆಂಟಿಮೆಂಟ್ ಎರಡೂ ಇರುವ, ಕುಟುಂಬ ಸಮೇತರಾಗಿ ನೋಡಬಹುದಾದ ಸುಂದರ ಚಿತ್ರ’ ಎಂದು ಹೇಳಿಕೊಂಡರು.
ನಾಯಕನಾಗಿ ‘ಡಾರ್ಲಿಂಗ್’ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸುತ್ತಿದ್ದಾರೆ. ಜತೆಗೆ ಅಚ್ಯುತ್ ಕುಮಾರ್, ಗಿರಿರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅವರಲ್ಲಿ ಒಂದು ಪಾತ್ರಕ್ಕೆ ಹೊಸಬರನ್ನು ಪರಿಚಯಿಸುವ ಐಡಿಯಾ ಚಿತ್ರತಂಡದ್ದು. ಈಗಾಗಲೇ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಶಶಾಂಕ್ ಸಿನಿಮಾಸ್ ಹಾಗೂ ಸಚಿವ ಬಿ.ಸಿ. ಪಾಟೀಲ್ ಅವರ ಕೌರವ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ವಿುಸುತ್ತಿವೆ.
‘ನಾನು ಬಿ.ಸಿ. ಪಾಟೀಲ್ ಅವರ ‘ಕೌರವ’ ಚಿತ್ರದಲ್ಲಿ ಎಸ್. ಮಹೇಂದರ್ ಬಳಿ ಕೆಲಸ ಮಾಡಿದ್ದೆ. ಆಗಿನಿಂದಲೂ ಅವರ ಪರಿಚಯವಿದೆ. ಈಗ ಅವರೊಂದಿಗೆ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಶಶಾಂಕ್. ಬಳಿಕ ಮಾತನಾಡಿದ ನಾಯಕ ಕೃಷ್ಣ, ‘ಶಶಾಂಕ್ ಅವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಈಗ ಈಡೇರಿದೆ. ‘ಕೌಸಲ್ಯಾ ಸುಪ್ರಜಾ ರಾಮ’ ಸುಂದರ ಶೀರ್ಷಿಕೆ. ‘ಲವ್ ಮಾಕ್ಟೇಲ್’, ‘ಲಕ್ಕಿಮ್ಯಾನ್’ ಸೇರಿದಂತೆ ಅನೇಕ ಚಿತ್ರಗಳ ಶೀರ್ಷಿಕೆ ಇಂಗ್ಲೀಷ್ನಲ್ಲಿದೆ. ಈಗ ಇಂಗ್ಲೀಷ್ ಇಲ್ಲದ ಶೀರ್ಷಿಕೆ ಸಿಕ್ಕಿದೆ. ಕಥೆ ಹಾಗೂ ನನ್ನ ಪಾತ್ರ ಚೆನ್ನಾಗಿದೆ’ ಎಂದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ ಇರಲಿದೆ.