ಶ್ರೀ ರಾಮಕುಂಜೇಶ್ವರ ದೇವಳದಲ್ಲಿ ಕೋಟಿ ಶಿವಪಂಚಾಕ್ಷರಿ ಜಪಯಜ್ಞ : ಲೋಕ ಕಲ್ಯಾಣಾರ್ಥ ಯೋಜನೆ ದುರ್ಗಾಪೂಜೆ, ಸಾಮೂಹಿಕ ಕುಂಕುಮಾರ್ಚನೆ

Published on

ವಿಜಯವಾಣಿ ಸುದ್ದಿಜಾಲ ಕಡಬ

ಶ್ರೀ ರಾಮಕುಂಜೇಶ್ವರ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥ ಕೋಟಿ ಶಿವಪಂಚಾಕ್ಷರಿ ಜಪಯಜ್ಞ, ದುರ್ಗಾಪೂಜೆ ಹಾಗೂ ಸಾಮೂಹಿಕ ಕುಂಕುಮಾರ್ಚನೆ ಶನಿವಾರ ಮತ್ತು ಭಾನುವಾರ ನಡೆಯಿತು.

ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಈರಕೀಮಠ ನರಹರಿ ಉಪಾಧ್ಯಾಯರ ಉಪಸ್ಥಿತಿಯಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು.

ಶನಿವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಅರಣೀಮಥನ, ಆಚಾರ್ಯ ಕುಂಡದಲ್ಲಿ ಅಗ್ನಿಜನನ ಕ್ರಿಯೆ, ಮಹಾಗಣಪತಿ ಹೋಮ, ಅಗ್ನಿ ವಿಹರಣೆ, ಪಂಚಕುಂಡಗಳಲ್ಲಿ ಶಿವಪಂಚಾಕ್ಷರಿ ಯಜ್ಞ ಆರಂಭ, ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ ಹೋಮಗಳ ಪೂರ್ಣಾಹುತಿ, ಮಂಗಳಾರತಿ, ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಸಂಜೆ ಸಾಮೂಹಿಕ ಕುಂಕುಮಾರ್ಚನೆ, ದುರ್ಗಾಪೂಜೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಭಾನುವಾರ ಬೆಳಗ್ಗೆ ಶಿವಪಂಚಾಕ್ಷರಿ ಯಜ್ಞ ಆರಂಭ, ಸಾಮೂಹಿಕ ಬಿಲ್ವಾರ್ಚನೆ, ಶಿವಪಂಚಾಕ್ಷರಿ ಜಪ, ದೇವರಿಗೆ ಏಕಾದಶ ರುದ್ರಾಭಿಷೇಕ ನಡೆಯಿತು. ಶಿವಪಂಚಾಕ್ಷರಿ ಜಪ ಮಹಾಯಜ್ಞದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ ಹಾಗೂ ಸದಸ್ಯರು, ದೇವಳದ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಅರ್ಚಕರು, ಸಿಬ್ಬಂದಿ, ಬೈಲುವಾರು ಸಂಚಾಲಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

1.34 ಕೋಟಿ ಜಪ

ಕೋಟಿ ಶಿವಪಂಚಾಕ್ಷರಿ ಜಪ ಯಜ್ಞಕ್ಕೆ ಪೂರ್ವಭಾವಿಯಾಗಿ ರಾಮಕುಂಜ ಹಾಗೂ ಹಳೆನೇರೆಂಕಿ ಗ್ರಾಮಗಳಲ್ಲಿ ನೂರಾರು ಭಕ್ತರು ದೇವರ ನಾಮಸ್ಮರಣೆ ಜಪ ಮಾಡಿದ್ದರು. ಬೆಳಗ್ಗೆ ಅಥವಾ ಸಂಜೆ ಶುಚೀರ್ಭೂತರಾಗಿ ಮಡಿಯುಟ್ಟು ದೇವರಿಗೆ ದೀಪ ಬೆಳಗಿಸಿ, ಹಣೆಗೆ ತಿಲಕವಿಟ್ಟು, ಕೈಯಲ್ಲಿ ತುಪ್ಪದ ಕರಡಿಗೆ ಹಿಡಿದುಕೊಂಡು ಭಕ್ತರು 1 ತಿಂಗಳಿನಿಂದ ಪ್ರತಿದಿನ ದೇವರ ನಾಮಸ್ಮರಣೆಯೊಂದಿಗೆ ತಮ್ಮಿಂದ ಸಾಧ್ಯವಾದಷ್ಟು ದೇವರ ನಾಮಸ್ಮರಣೆ ಜಪ ಮಾಡಿದ್ದರು. ಈ ರೀತಿಯಾಗಿ ಭಕ್ತರು 1.34 ಕೋಟಿ ಜಪ ಮಾಡಿ ತುಪ್ಪವನ್ನು ದೇವರಿಗೆ ಸಮರ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net