

ಕೊಪ್ಪಳ: ಜೂಜಾಟದ ಅಡ್ಡೆಗಳ ಮೇಲೆ ದಾಳಿ ಮಾಡಿದ ಪೊಲೀಸರು, ತಪ್ಪಿತಸ್ಥರನ್ನು ಬಂಧಿಸುವ ಬದಲು ಅಲ್ಲಿದ್ದ ಕೋಳಿಗಳನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿ ಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ವ್ಯಾಪ್ತಿಯಲ್ಲಿ.
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಕೋಳಿ ಕಾಳಗ ನಡೆಯುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ದಾಳಿ ಮಾಡುವ ವೇಳೆ ಯಾವೊಬ್ಬನೂ ಸ್ಥಳದಲ್ಲಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಪೊಲೀಸರು ಅಲ್ಲಿದ್ದ ಎರಡು ಹುಂಜ ಹಾಗೂ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳ ಜೆಲ್ಲೆಯ ಕಾರಟಗಿ ಪೊಲೀಸ್ ಠಾಣೆಯ ಪುರುಷರ ಬಂದಿಖಾನೆಯಲ್ಲಿ ಎರಡು ಕೋಳಿಗಳನ್ನು ಬಂಧಿಸಿ ಇಡಲಾಗಿದೆ. ಜೂಜುಕೋರರನ್ನು ಬಿಟ್ಟು ಕೋಳಿಗಳನ್ನು ಬಂಧಿಸಿರುವ ಪೊಲೀಸರು ನಡೆಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಾಳಿ ವೇಳೆ ಜೂಜಾಡುತ್ತಿದ್ದವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿರುವುದು ವರದಿಯಾಗಿದೆ.