

ಬೆಂಗಳೂರು: ಕಳೆದ ಜನರವರಿ 13ರಂದು ಸಾಗರ್ ಫ್ಲೈವುಡ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ಸಿಸಿಟಿವಿ ದೃಶ್ಯ ಹಾಗೂ ಇನ್ನಿತರ ಮಾರ್ಗಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ತನಿಖೆ ನಡೆಸಿದ ಪೊಲೀಸರು ಅಪರಿಚಿತ ಶವದ ಗುರುತು ಪತ್ತೆ ಮಾಡಿ, ಎದುರಾಗಿದ್ದ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದಾರೆ.
ಅಪರಿಚಿತ ಶವವನ್ನು ಪರಿಶೀಲಿಸಿದ ಪೊಲೀಸರಿಗೆ ಎಲುಬುಗಳು ಮುರಿದಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ ಕೊಲೆ ಆಯಾಮದಲ್ಲಿ ತನಿಖೆ ಆರಂಭಿಸಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ ಎಂಬಾತನನ್ನು ಮೊದಲು ಪತ್ತೆ ಮಾಡಿದ್ದರು. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಪರಿಚಿತ ಶವ ವೆಂಕಟಸ್ವಾಮಿ ಎಂಬುವವರದ್ದು ಎಂದು ತಿಳಿದು ಬಂದಿದೆ.
ಕೊಲೆಯಾದ ವೆಂಕಟಸ್ವಾಮಿ ಅಂದು ಜಿಟಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಬಳಿ ಬಸ್ ನಿಲ್ಲಿಸಿ ಮಲಗಿದ್ದ. ಈ ವೇಳೆ ಆರೋಪಿ ವೆಂಕಟೇಶ್ ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆಂದು ಗಲಾಟೆ ಮಾಡಿದ್ದ. ಅಲ್ಲದೇ, ಕಲ್ಲಿನಿಂದ ಬಸ್ಸಿನ ಗಾಜನ್ನು ಒಡೆದು ಹಾಕಿದ್ದ. ಇಷ್ಟಕ್ಕೆ ಸುಮ್ಮನಾಗದೆ ತಾನು ಬಸ್ ನಿಲ್ಲಿಸಿದ ಜಾಗದಲ್ಲಿ ಬಸ್ ನಿಲ್ಲಿಸಿದ್ದಾನೆ ಎಂಬ ಸಿಟ್ಟಿನಲ್ಲಿ ವೆಂಕಟೇಶ್ ಎದೆಯ ಭಾಗಕ್ಕೆ ಒದ್ದು ವೆಂಕಟಸ್ವಾಮಿಯನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ವೆಂಕಟೇಶ್ ನಂತರ ಮೃತದೇಹವನ್ನು ಸುಂಕದಕಟ್ಟೆ ಬಳಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ತನಿಖೆ ನಡೆಸಿದ ಪೊಲೀಸರು ಆರೋಪಿ ವೆಂಕಟೇಶ್ನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.