

ಹೈದರಾಬಾದ್: ಸಿನಿಮಾ ನಟ-ನಟಿ ವಿಚ್ಛೇದನ ವಿಚಾರವನ್ನು ಪ್ರಮುಖ ರಾಜಕಾರಣಿಯೊಬ್ಬರ ಜತೆ ಥಳಕು ಹಾಕಿದ ತೆಲಂಗಾಣ ಸಚಿವೆ ಕೊಂಡಾ ಸುರೇಖಾ(Konda Surekha) ವಿರುದ್ಧ ಉಭಯ ತೆಲುಗು ರಾಜ್ಯಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದಂತೆ ಆಕೆ ಶೀಘ್ರದಲ್ಲೇ ರಾಜೀನಾಮೆ ನೀಡುತ್ತಾರೆ ಅಥವಾ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮ ಸಂಪುಟದಿಂದ ವಜಾಗೊಳಿಸುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ತೆಲುಗು ರಾಜ್ಯಗಳಲ್ಲಿ ಸಚಿವರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಸಚಿವೆ ಸುರೇಖಾರನ್ನು ಟಾರ್ಗೆಟ್ ಮಾಡಿ ನಟ, ನಟಿಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕೋಪಗೊಂಡು ಕೀರ್ತಿ ಶೇಷುಲು ಜೊತೆಗೆ ಸುರೇಖಾ ಬ್ಯಾನರ್‌ಗಳನ್ನು ಪ್ರದರ್ಶಿಸಿ, ಆಕೆ ಮೃತಪಟ್ಟಿದ್ದಾರೆ ಎಂದು ಪೋಸ್ಟರ್ ಹಾಕುತ್ತಿದ್ದಾರೆ.
ಆಕೆ ಆಡಿದ ಮಾತು ರಾಜಕೀಯವಾಗಿತೊಂದರೆಗೆ ಸಿಲುಕಿಸಿದೆ. ಕೊಂಡಾ ಸುರೇಖಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹ ಗಂಭೀರ ಸ್ವರೂಪ ಪಡೆಯುತ್ತಿದೆ.
ತೆಲಂಗಾಣ ಸಿಎಂ ರೇವಂತ್ರೆಡ್ಡಿ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆ ಆಗಬೇಕಿದೆ. ಕೆಲ ತಿಂಗಳಿಂದ ಸಚಿವ ಸಂಪುಟ ವಿಸ್ತರಣೆ ಮಾತು ಕೇಳಿಬರುತ್ತಿದ್ದು, ಇತ್ತೀಚೆಗಷ್ಟೇ ಮುಖ್ಯಮಂತ್ರಿ ದೆಹಲಿಗೆ ಭೇಟಿ ನೀಡಿದ್ದು, ದಸರಾ ಮುಗಿಯುವ ಒಳಗೆ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಸಂದರ್ಭದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿರುವ ಸುರೇಖಾ ಅವರನ್ನು ವಜಾಗೊಳಿಸುವ ಅಥವಾ ರಾಜೀನಾಮೆ ಪಡೆಯುವ ಸಾಧ್ಯತೆಯಿದೆ. ರಾಜಕೀಯ ವಲಯದಲ್ಲಿ ಈ ಬಗ್ಗೆ ಚರ್ಚೆ ಸಹ ಜೋರಾಗಿ ಕೇಳಿ ಬರುತ್ತಿದೆ.