ಕೊಳ್ಳೇಗಾಲದಲ್ಲಿ ಅಡುಗೆ ಮನೆಯ ಕಿಟಕಿ ಸರಳು ಕತ್ತರಿಸಿ 14.85 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು!

Untitled-1
Published on

ಕೊಳ್ಳೇಗಾಲ: ಅಡುಗೆ ಮನೆಯ ಕಿಟಕಿಯ ಸರಳು ಕತ್ತರಿಸಿ ಮನೆಯೊಳಗೆ ನುಗ್ಗಿದ ಕಳ್ಳರು 14.85 ಲಕ್ಷ ರೂ. ಬೆಳೆ ಬಾಳುವ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದಲ್ಲಿ ಸಂಭವಿಸಿದೆ.

ಕೊಳ್ಳೇಗಾಲ ಪಟ್ಟಣದ ಶ್ರೀ ಬಸವೇಶ್ವರ ನಗರದ ನಿವಾಸಿ, ಶ್ರೀದತ್ತ ಮೆಡಿಕಲ್ ಮಾಲೀಕ ಎಸ್.ವಿನಯ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ. ವಿನಯ್ ಅವರು ಜ.17ರಂದು ಕಾರ್ಯನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದರು. ಇವರ ಪತ್ನಿ ರಶ್ಮಿ ಜ.18ರಂದು ಮೆಡಿಕಲ್ ವ್ಯಾಪಾರ ಮುಗಿಸಿ ಮನೆಗೆ ಮರಳಿದ್ದಾರೆ. ಈ ವೇಳೆ ಅಡುಗೆ ಮನೆಗೆ ಹೋದಾಗ ಯಾರೋ ಕಿಟಕಿ ಸರಳು ಕತ್ತರಿಸಿರುವುದು ತಿಳಿದು ಬಂದಿದೆ. ನಂತರ ಬೆಡ್ ರೂಂಗೆ ಹೋಗಿ ನೋಡಲಾಗಿ ಗಾಡ್ರೇಜ್ ಬೀರುವಿನಲ್ಲಿದ್ದ 50 ಸಾವಿರ ಹಣ ಹಾಗೂ 14.85 ಲಕ್ಷ ಬೆಳೆ ಬಾಳುವ 495 ಗ್ರಾಂ ಚಿನ್ನಾಭರಣ ಕಳ್ಳತನ ಆಗಿರುವುದು ತಿಳಿದು ಬಂದಿದೆ.

ಯಾವ ಯಾವ ಆಭರಣ?: 50 ಸಾವಿರ ನಗದು, 40 ಗ್ರಾಂ ತೂಕದ 2 ಡೈಮೆಂಡ್ ಬ್ಯಾಂಗಲ್ಸ್, 80 ಗ್ರಾಂ ತೂಕದ ಎರಡು ಗ್ರೀನ್ ಸ್ಟೋನ್ ನೆಕ್ಲೆಸ್, 30 ಗ್ರಾಂ ತೂಕದ ವೈಟ್ ಸ್ಟೋನ್ ಚಿನ್ನದ ನೆಕ್ಲೆಸ್, 25 ಗ್ರಾಂನ ಚಿನ್ನದ ಕರಿಮಣಿ ಸರ, 30 ಗ್ರಾಂ ಚಿನ್ನದ ನೆಕ್ಲೆಸ್, 30 ಗ್ರಾಂನ ಪೆಂಡೆಂಟ್ ಮೂರು ಸೆಟ್ ಓಲೆ, 15 ಗ್ರಾಂನ ಡೈಮೆಂಡ್ ಉಂಗುರ,12 ಗ್ರಾಂನ ನವರತ್ನ ಉಂಗುರ,45 ಗ್ರಾಂನ ನಾಲ್ಕು ನವರತ್ನ ಉಂಗುರಗಳು, 10 ಗ್ರಾಂ ತೂಕದ ಐದು ಬೇಬಿ ಉಂಗುರಗಳು, 18 ಗ್ರಾಂ ಕರಿಮಣಿ ಸ್ಮಾಲ್ ಚೈನ್, 40 ಗ್ರಾಂನ ರೂಬಿ ಚೈನ್, 45 ಗ್ರಾಂನ ವೈಟ್ ಸ್ಟೋನ್ ನೆಕ್ಲೆಸ್, 75 ಗ್ರಾಂನ ಬ್ರ್ಯಾಸ್ಲೆಟ್ ಕಳ್ಳತನ ಆಗಿದೆ.

ಶಿವಮೊಗ್ಗದಿಂದ ಜ.19ರಂದು ಮನೆಗೆ ಹಿಂದಿರುಗಿದ ವಿನಯ್, ಈ ಬಗ್ಗೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳತನ ನಡೆದಿರುವ ಸಂಬಂಧ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದ್ದೇಶ್, ವೃತ್ತ ನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಸಬ್ ಇನ್​ಸ್ಪೆಕ್ಟರ್ ಚೇತನ್, ಉಮಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net