ಕೋಲ್ಕತಾ: ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಸಂಜಯ್ ರಾಯ್ ಮಾತ್ರ ಆರೋಪಿ ಎಂದು ಸಿಬಿಐ ಗುರುತಿಸಿದೆ. ಹಾಗೂ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡದಿದೆ ಎಂಬುದನ್ನು ಕೇಂದ್ರೀಯ ತನಿಖಾ ದಳ ತಳ್ಳಿಹಾಕಿದೆ. ಸಿಬಿಐ ತನಿಖೆ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಸಲಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಆರ್‌ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ 8 ದಿನ ಸಿಬಿಐ ಕಸ್ಟಡಿಗೆ
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆಯಲ್ಲಿ ಸಂಜಯ್ ರಾಯ್ (ಪೊಲೀಸರಿಂದ ಬಂಧಿಸಲ್ಪಟ್ಟವರು) ಮಾತ್ರ ಭಾಗಿಯಾಗಿದ್ದಾರೆ ಎಂದು ಲಭ್ಯವಿರುವ ಪುರಾವೆಗಳು ಸೂಚಿಸುವುದರಿಂದ ಕೇಂದ್ರೀಯ ತನಿಖಾ ದಳವು ಸಾಮೂಹಿಕ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಸಿಬಿಐ 100ಕ್ಕೂ ಹೆಚ್ಚು ಹೇಳಿಕೆಗಳನ್ನು ದಾಖಲಿಸಿದೆ. ಸುಮಾರು 10 ಶಂಕಿತರ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರ ಹೆಸರೂ ಇದರಲ್ಲಿ ಸೇರಿದೆ. ಸಿಬಿಐ ವೈದ್ಯಕೀಯ ವರದಿಯನ್ನು ಆರೋಪಿಯ ಡಿಎನ್‌ಎಯೊಂದಿಗೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ತನಿಖೆಗಾಗಿ ಕಳುಹಿಸಿದೆ ಮತ್ತು ಅವರು ಫಲಿತಾಂಶಗಳನ್ನು ಪಡೆದ ನಂತರ ತಮ್ಮ ವರದಿಯನ್ನು ಪೂರ್ಣಗೊಳಿಸುತ್ತಾರೆ.
ಆಗಸ್ಟ್ 9ರಂದು ಬೆಳಗ್ಗೆ ಆಸ್ಪತ್ರೆಯ ಆವರಣದ ಸೆಮಿನಾರ್ ಕೊಠಡಿಯಿಂದ ಸಂತ್ರಸ್ತೆಯ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಸಂದೀಪ್ ಘೋಷ್ ಅವರು ಸೆಮಿನಾರ್ ಹಾಲ್ ಪಕ್ಕದ ಕೊಠಡಿ ಮತ್ತು ಶೌಚಾಲಯದಲ್ಲಿ ದುರಸ್ತಿಗಾಗಿ ರಾಜ್ಯ ಪಿಡಬ್ಲ್ಯೂಡಿಗೆ ಅನುಮತಿ ಪತ್ರವನ್ನು ನೀಡಿದ್ದರು. ಇದೇ ಜಾಗದಲ್ಲಿ ಅಪರಾಧ ಕೃತ್ಯ ನಡೆದಿದೆ. ಘಟನೆ ಸಂಬಂಧ ವಿಚಾರಣೆ ನಡೆಸುತ್ತಿದ್ದ ಸಿಬಿಐ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಂಶುಪಾಲರಾಗಿದ್ದ ಡಾ.ಸಂದೀಪ್ ಘೋಷ್ ಅವರನ್ನು ವಶಕ್ಕೆ ಪಡೆದಿತ್ತು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಘೋಷ್ ವಿರುದ್ಧ ಕಾಲೇಜಿನಲ್ಲಿ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಆರೋಪವಿದೆ. ಸದ್ಯ ಸಂದೀಪ್ ಘೋಷ್ ಸಿಬಿಐ ಕಸ್ಟಡಿಯಲ್ಲಿದ್ದಾರೆ. (ಏಜೆನ್ಸೀಸ್)
ಕುಡಿದ ನಶೆಯಲ್ಲಿ ಪ್ರಯಾಣಿಕನ ಕಿರಿಕ್; ವಿಮಾನದಲ್ಲಿ ಮುಂದೇನಾಯ್ತು ನೀವೇ ನೋಡಿ