

ಮಡಿಕೇರಿ: ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಮೇಜರ್ ಜನರಲ್ ಕೊಡಂದೇರ ಅರ್ಜುನ್ ಮುತ್ತಣ್ಣ (ನಿವೃತ್ತ) ಅವರಿಗೆ ಬಂದೂಕು ಪರವಾನಗಿ ವಿನಾಯಿತಿ ಪತ್ರ ನೀಡಲು ಕೊಡಗು ಜಿಲ್ಲಾಡಳಿತ ಸತಾಯಿಸುತ್ತಿದೆ.
ಭಾರತೀಯ ಸೇನೆಯಲ್ಲಿ ಬರೋಬರಿ 37 ವರ್ಷ ಸೇವೆ ಸಲ್ಲಿಸಿರುವ ಸೇನಾಧಿಕಾರಿ ಅರ್ಜಿ ಏಳು ವರ್ಷದಿಂದ ವಿಲೇವಾರಿ ಆಗಿಲ್ಲ. 2013 ರಲ್ಲಿ ಮೊದಲ ಹಾಗೂ 2015 ರಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಿದ್ದಾರೆ.
ಬಂದೂಕು ಪರವಾನಗಿ ವಿನಾಯಿತಿ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮಡಿಕೇರಿ ತಾಲೂಕು ಕಚೇರಿಯಲ್ಲಿ ಇವರ ಕಡತವೇ ಇಲ್ಲ. ಹೊಸದಾಗಿ ದಾಖಲೆ ಸಹಿತ ಅರ್ಜಿ ಸಲ್ಲಿಸಿದಲ್ಲಿ ಒಂದು ವಾರದಲ್ಲಿ ಕಡತ ವಿಲೇವಾರಿ ಮಾಡಲಾಗುವುದೆಂದು ಕೇಸ್ ವರ್ಕರ್ ಹೇಳುತ್ತಾರೆ.
2018 ರಲ್ಲಿ ಜಿಲ್ಲಾಧಿಕಾರಿ ಆಗಿದ್ದ ಶ್ರೀವಿದ್ಯಾ ಅವರನ್ನು ಖುದ್ದು ಭೇಟಿ ಮಾಡಿ ಗಮನ ಸೆಳೆದ ಸಂದರ್ಭದಲ್ಲಿ ತಕ್ಷಣ ವಿಲೇವಾರಿ ಮಾಡುವ ಭರವಸೆ ನೀಡಿದ್ದರು. ತದನಂತರ ಪ್ರಕೃತಿ ವಿಕೋಪ ಸಂಭವಿಸಿದ್ದರಿಂದ ಅತ್ತ ಗಮನ ಹರಿಸಲು ಸಾಧ್ಯವಾಗಲಿಲ್ಲ. ಹಾಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಎರಡು ಸಲ ಪತ್ರ ಬರೆದಿದ್ದು, ಆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮಡಿಕೇರಿ ತಹಸೀಲ್ದಾರ್ ಗೆ ಡಿಸಿ ಪತ್ರ ಕಳುಹಿಸಿದ್ದರು.
ಏಳು ವರ್ಷದ ಹಿಂದೆ ಮೊದಲ ಅರ್ಜಿ, ಐದು ವರ್ಷದ ಹಿಂದೆ ಎರಡನೇ ಅರ್ಜಿ ಸಲ್ಲಿಸಿದ್ದೇನೆ. ಹಾಲಿ ಡಿಸಿಗೆ ಎರಡು ಪತ್ರ ಬರೆದಿದ್ದೇನೆ. ಆದರೆ, ಇದುವರೆಗೂ ನನಗೆ ಬಂದೂಕು ಪರವಾನಗಿ ವಿನಾಯಿತಿ ಪತ್ರ ಸಿಕ್ಕಿಲ್ಲ. ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ (ನಿವೃತ್ತ)