

ಬೆಂಗಳೂರು: ಟೀಮ್ ಇಂಡಿಯಾ ಬ್ಯಾಟರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮುಂಬರುವ ಏಷ್ಯಾಕಪ್-ವಿಶ್ವಕಪ್ ಪೂರ್ವಭಾವಿಯಾಗಿ ಸಂಪೂರ್ಣ ಫಿಟ್ನೆಸ್ ಕಂಡುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದಾರೆ. ಎನ್ಸಿಎಯಲ್ಲಿ ಶುಕ್ರವಾರ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅವರು ಉತ್ತೀರ್ಣರಾಗಿದ್ದು, ಭಾರತ ತಂಡಕ್ಕೆ ಮರಳುವ ಹಾದಿ ಸುಗಮಗೊಂಡಿದೆ.
ಫಿಟ್ನೆಸ್ ಪರೀಕ್ಷೆಯಲ್ಲಿ ರಾಹುಲ್ ನಿಶ್ಚಿತ ಸಮಯದವರೆಗೆ ಯಾವುದೇ ಎಗ್ಗಿಲ್ಲದೆ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಕೌಶಲ ಪ್ರದರ್ಶಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ, ಏಷ್ಯಾಕಪ್ಗೆ ಸೋಮವಾರ ಪ್ರಕಟಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ನಿಶ್ಚಿತವೆನಿಸಿದೆ. ಅಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಜತೆಗೆ ವಿಕೆಟ್ ಕೀಪರ್ ಆಗಿಯೂ ಅವರು ಆಡಲಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 4ನೇ ಕ್ರಮಾಂಕದಲ್ಲಿ ಆಡಿದ 7 ಇನಿಂಗ್ಸ್ಗಳಲ್ಲಿ 1 ಶತಕ ಸಹಿತ 40.17ರ ಸರಾಸರಿಯಲ್ಲಿ 241 ರನ್ ಗಳಿಸಿರುವ ರಾಹುಲ್, ಟೀಮ್ ಇಂಡಿಯಾದ ಬಲುದೊಡ್ಡ ತಲೆನೋವು ದೂರ ಮಾಡುವ ನಿರೀೆ ಇದೆ. ಕಳೆದ ಮಾರ್ಚ್ 22ರಂದು ಚೆನ್ನೆ$ನಲ್ಲಿ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್ ಕೊನೆಯದಾಗಿ ಭಾರತ ಪರ ಆಡಿದ್ದರು.
ಫಿಟ್ ಆಗದ ಶ್ರೇಯಸ್: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮತ್ತೋರ್ವ ಬ್ಯಾಟರ್ ಶ್ರೇಯಸ್ ಅಯ್ಯರ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಅವರು ಇನ್ನೂ ಕೆಲ ದಿನಗಳ ಬಳಿಕ ಫಿಟ್ನೆಸ್ ಪರೀೆ ಎದುರಿಸಲಿದ್ದಾರೆ. ಹೀಗಾಗಿ ಏಷ್ಯಾಕಪ್ ತಂಡದಲ್ಲಿ ಅವರ ಸ್ಥಾನ ಅನಿಶ್ಚಿತವೆನಿಸಿದೆ.
ಆಯ್ಕೆ ಸಮಿತಿ ಸಭೆಗೆ ರೋಹಿತ್
ಏಷ್ಯಾಕಪ್ಗೆ ಭಾರತ ತಂಡದ ಆಯ್ಕೆಗೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ನವದೆಹಲಿಯಲ್ಲಿ ಸಭೆ ಸೇರಲಿದ್ದು, ನಾಯಕ ರೋಹಿತ್ ಶರ್ಮ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ.