

Kamindu Mendis : ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ಕಮಿಂದು ಮೆಂಡಿಸ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರೊಬ್ಬ ಅಪರೂಪದ ಬೌಲರ್. ತನ್ನ ಎರಡೂ ಕೈಗಳಿಂದ ಬೌಲ್ ಮಾಡುವ ವಿಶೇಷ ಕೌಶಲ್ಯವನ್ನು ಹೊಂದಿದ್ದಾರೆ. ಪ್ರಸ್ತುತ ಐಪಿಎಲ್ 18ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡುತ್ತಿದ್ದಾರೆ.
ನಿನ್ನೆ (ಏಪ್ರಿಲ್ 03) ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ಗೆ ಪದಾರ್ಪಣೆ ಮಾಡಿದ ಕಮಿಂದು ಮೆಂಡಿಸ್, ಕೇವಲ ಒಂದು ಓವರ್ ಬೌಲ್ ಮಾಡಿದರು. ಅಚ್ಚರಿಯ ಸಂಗತಿ ಏನೆಂದರೆ, ಮಾಡಿದ್ದು ಒಂದೇ ಓವರ್ ಆದರು ಕೂಡ ತಮ್ಮ ಎರಡೂ ಕೈಗಳಿಂದ ಬೌಲಿಂಗ್ ಮಾಡಿದರು. ಎಡಗೈಯಿಂದ ಬಲಗೈ ಬ್ಯಾಟ್ಸ್ಮನ್ಗಳಿಗೆ ಮತ್ತು ಬಲಗೈಯಿಂದ ಎಡಗೈ ಬ್ಯಾಟ್ಸ್ಮನ್ಗಳಿಗೆ ಬೌಲ್ ಮಾಡಿದರು. ಅಷ್ಟೇ ಅಲ್ಲ ಒಂದು ವಿಕೆಟ್ ಕೂಡ ಪಡೆದರು.
ಎಸ್ಆರ್ಎಚ್ ನಾಯಕ ಪ್ಯಾಟ್ ಕಮಿನ್ಸ್ 13ನೇ ಓವರ್ನಲ್ಲಿ ಮೆಂಡಿಸ್ಗೆ ಚೆಂಡನ್ನು ನೀಡಿದರು. ಈ ವೇಳೆ ಕ್ರೀಸ್ನಲ್ಲಿದ್ದ ಎಡಗೈ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ಗೆ ಬಲಗೈಯಿಂದ ಮತ್ತು ಬಲಗೈ ಬ್ಯಾಟ್ಸ್ಮನ್ ಅಂಗ್ಕ್ರಿಶ್ ರಘುವಂಶಿಗೆ ಎಡಗೈಯಿಂದ ಬೌಲಿಂಗ್ ಮಾಡಿದರು. ಈ ವೇಳೆ ಆಂಗ್ಕ್ರಿಶ್ ರಘುವಂಶಿ, ಓವರ್ನ ನಾಲ್ಕನೇ ಎಸೆತದಲ್ಲಿ ಔಟಾದರು.
ಮೆಂಡಿಸ್ ತಮ್ಮ ಐಪಿಎಲ್ ಚೊಚ್ಚಲ ಪಂದ್ಯದಲ್ಲಿ ಒಂದು ಓವರ್ ಬೌಲ್ ಮಾಡಿ ಕೇವಲ ನಾಲ್ಕು ರನ್ ನೀಡಿ ಒಂದು ವಿಕೆಟ್ ಪಡೆದರು. ಮೆಂಡಿಸ್ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಐಪಿಎಲ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನೀವು ಗೊಂದಲಕ್ಕೊಳಗಾಗಿದ್ದೀರಾ? ಎಂದು ಕ್ಯಾಪ್ಸನ್ ನೀಡಲಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ನೀನು ಭಾರತ ತಂಡದಲ್ಲಿರಬೇಕಿತ್ತು ಸ್ವಾಮಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಬಲಗೈ ಬ್ಯಾಟ್ಸ್ಮನ್ಗಳು ಸಾಮಾನ್ಯವಾಗಿ ಎಡಗೈ ಸ್ಪಿನ್ನ ದಾಳಿ ಎದುರಿಸಲು ಎಡವುತ್ತಾರೆ. ಅದೇ ರೀತಿ ಎಡಗೈ ಬ್ಯಾಟ್ಸ್ಮನ್ಗಳು ಬಲಗೈ ಬೌಲರ್ ದಾಳಿಯಿಂದ ಕಿರಿಕಿರಿಗೆ ಒಳಗಾಗುತ್ತಾರೆ. ಹೀಗಾಗಿಯೇ ಮೆಂಡಿಸ್ ಇಬ್ಬರನ್ನು ಕಾಡಲು ಯತ್ನಿಸಿದರು. ಮೆಂಡಿಸ್ ಅವರ ಬೌಲಿಂಗ್ ದಾಳಿ ನೋಡಿದ ನೆಟ್ಟಿಗರು ಎರಡೂ ಕೈಯಿಂದ ಬೌಲಿಂಗ್ ಮಾಡುವುದು ಸರಿಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ ಇದು ಸರಿಯಾಗಿದೆ.
ನಿಯಮಗಳ ಪ್ರಕಾರ ಬೌಲರ್ ಎರಡೂ ಕೈಯಿಂದ ಬೌಲ್ ಮಾಡಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಚೆಂಡು ಎಸೆಯುವ ಮುನ್ನ ಅಂಪೈರ್ಗೆ ಮಾಹಿತಿ ನೀಡಬೇಕು. ಆಗ ಅಂಪೈರ್ ಬ್ಯಾಟರ್ಗೆ ಈ ಬಗ್ಗೆ ಹೇಳುತ್ತಾರೆ. ಈ ರೀತಿಯ ಬೌಲಿಂಗ್ ಪ್ರತಿಭೆ ಬಹಳ ಅಪರೂಪ. ಅಂದಹಾಗೆ ಕಮಿಂದು ಬ್ಯಾಟಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದರು. ಕೇವಲ 20 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ 27 ರನ್ ಗಳಿಸಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಕೋಲ್ಕತ್ತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಕೆಕೆಆರ್ ಬ್ಯಾಟ್ಸ್ಮನ್ಗಳಲ್ಲಿ ವೆಂಕಟೇಶ್ ಅಯ್ಯರ್ (60 ರನ್ 29 ಎಸೆತ, 7 ಬೌಂಡರಿ, 3 ಸಿಕ್ಸರ್) ಮತ್ತು ಅಂಗ್ಕ್ರಿಶ್ ರಘುವಂಶಿ (50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಮಿಂಚಿನ ಅರ್ಧಶತಕ ಗಳಿಸಿದರು. ರಿಂಕು ಸಿಂಗ್ (ಔಟಾಗದೆ 32 ರನ್, 17 ಎಸೆತ, 4 ಬೌಂಡರಿ, 1 ಸಿಕ್ಸರ್) ಗುರಿ ಮುಟ್ಟಿದರು. ಸನ್ರೈಸರ್ಸ್ ಬೌಲರ್ಗಳಲ್ಲಿ ಶಮಿ, ಕಮಿನ್ಸ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್ ಮತ್ತು ಜೀಶನ್ ಅನ್ಸಾರಿ ತಲಾ ಒಂದು ವಿಕೆಟ್ ಪಡೆದರು.
ನಂತರ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 16.4 ಓವರ್ಗಳಲ್ಲಿ 120 ರನ್ ಗಳಿಗೆ ಕುಸಿದಿತ್ತು. ಇದರೊಂದಿಗೆ ಕೆಕೆಆರ್ 80 ರನ್ಗಳ ಜಯ ಸಾಧಿಸಿತು. ಹೈದರಾಬಾದ್ ಪರ ಹೆನ್ರಿಚ್ ಕ್ಲಾಸೆನ್ (33) ಮತ್ತು ಕಮಿಂದು ಮೆಂಡಿಸ್ (27) ಉತ್ತಮ ಸ್ಕೋರರ್ ಎನಿಸಿಕೊಂಡರು. ಕೆಕೆಆರ್ ಬೌಲರ್ಗಳಲ್ಲಿ ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದರು. ಆಂಡ್ರೆ ರಸೆಲ್ ಎರಡು ವಿಕೆಟ್ ಪಡೆದರೆ, ಹರ್ಷಿತ್ ರಾಣಾ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)