ಲೈಂಗಿಕ ಕ್ರಿಯೆಗಾಗಿ ಐವರು ಮಹಿಳೆಯರನ್ನು ಗಿಫ್ಟ್​ ಆಗಿ ಪಡೆದ ಹಾಲಿವುಡ್​ ನಟನಿಗೆ ಎದುರಾಯ್ತು ಸಂಕಷ್ಟ! Jean Claude Van Damme

Jean Claude Van Damme
Published on

Jean Claude Van Damme : ಬೆಲ್ಜಿಯಂ ಮೂಲದ ಮಾರ್ಷಲ್ ಆರ್ಟಿಸ್ಟ್ ಮತ್ತು ಹಾಲಿವುಡ್​ ನಟ ಜೀನ್-ಕ್ಲೌಡ್ ವ್ಯಾನ್ ಡ್ಯಾಮ್ ವಿರುದ್ಧ ಕಳ್ಳಸಾಗಣೆ ಮಾಡಲಾದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪವನ್ನು ಹೊರಿಸಲಾಗಿದೆ.

ಮಾನವ ಕಳ್ಳಸಾಗಾಣೆ ಅಪರಾಧದ ಜಾಲದಿಂದ ಸೆಕ್ಸ್​​ಗಾಗಿ ಐವರು ಮಹಿಳೆಯರನ್ನು ಉಡುಗೊರೆಯಾಗಿ ಸ್ವೀಕರಿಸಿದ ಆರೋಪ 64 ವರ್ಷದ ವ್ಯಾನ್​ ಡ್ಯಾಮ್​ ಮೇಲಿದೆ. ಸಂತ್ರಸ್ತ ಮಹಿಳೆಯರು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ ಎಂದು ತಿಳಿದಿದ್ದರು ಸಹ ಉಡುಗೊರೆಯನ್ನಾಗಿ ಸ್ವೀಕರಿಸಿದ್ದಾರೆ ಎಂದು ರೊಮೇನಿಯನ್ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ತನಿಖೆ ಮಾಡುವ ನಿರ್ದೇಶನಾಲಯಕ್ಕೆ ರೊಮೇನಿಯನ್ ಅಧಿಕಾರಿಗಳು ದೂರು ನೀಡಿದ್ದಾರೆ.

ಫ್ರಾನ್ಸ್‌ನ ಕೇನ್ಸ್‌ನಲ್ಲಿ ನಡೆದ ವ್ಯಾನ್ ಡ್ಯಾಮ್ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತರಲ್ಲಿ ಒಬ್ಬರು ಮಾಡಿದ ಆರೋಪಗಳ ಕುರಿತು ರೊಮೇನಿಯನ್ ತನಿಖಾ ಏಜೆನ್ಸಿ ನಡೆಸಿದ ತನಿಖೆಯ ನಂತರ ವ್ಯಾನ್​ ಡ್ಯಾಮ್​ ಮೇಲೆ ಈ ಆರೋಪ ಹೊರಿಸಲಾಯಿತು.

ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಹಲವಾರು ಜನರು ವ್ಯಾನ್ ಡ್ಯಾಮ್‌ಗೆ ಐದು ರೊಮೇನಿಯನ್ ಮಹಿಳೆಯರನ್ನು ನೀಡುವುದಾಗಿ ಹೇಳಿದ್ದರು. ನಟನಿಗೆ ಅವರ ಸ್ಥಿತಿಯ ಬಗ್ಗೆಯೂ ತಿಳಿದಿತ್ತು, ಆದರೂ, ಅವರನ್ನು ವ್ಯಾನ್​ ಡ್ಯಾಮ್​ ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಸಂತ್ರಸ್ತರ ಪರ ವಕೀಲರು ತಿಳಿಸಿದ್ದಾರೆ. ವ್ಯಾನ್ ಡ್ಯಾಮ್ ವಿರುದ್ಧ ಈಗ ದಾಖಲಾಗಿರುವ ಪ್ರಕರಣವು 2020ರಲ್ಲಿ ಪ್ರಾರಂಭವಾದ ಮಾನವ ಕಳ್ಳಸಾಗಣೆ ತನಿಖೆಯ ಭಾಗವಾಗಿದೆ.

ಅಂದಹಾಗೆ ಈ ಜೀನ್-ಕ್ಲೌಡ್ ವ್ಯಾನ್ ಡ್ಯಾಮ್, ಬೆಲ್ಜಿಯಂ ಮೂಲದ ಮಾರ್ಷಲ್ ಆರ್ಟಿಸ್ಟ್, ನಟ ಮತ್ತು ಚಲನಚಿತ್ರ ನಿರ್ಮಾಪಕ. ಬ್ಲಡ್‌ಸ್ಪೋರ್ಟ್ (1988), ಕಿಕ್‌ಬಾಕ್ಸರ್ (1989) ಮತ್ತು ಯೂನಿವರ್ಸಲ್ ಸೋಲ್ಜರ್ (1992) ಎಂಬ ಆಕ್ಷನ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. 1960ರಲ್ಲಿ ಬೆಲ್ಜಿಯಂನಲ್ಲಿ ಜನಿಸಿದ ಅವರು 1980ರ ದಶಕದಲ್ಲಿ ಹಾಲಿವುಡ್‌ಗೆ ತೆರಳುವ ಮೊದಲು ಕರಾಟೆ ಮತ್ತು ಕಿಕ್‌ಬಾಕ್ಸಿಂಗ್‌ನಲ್ಲಿ ತರಬೇತಿ ಪಡೆದರು.

"ದಿ ಮಸಲ್ಸ್ ಫ್ರಮ್ ಬ್ರಸೆಲ್ಸ್" ಎಂಬ ಅಡ್ಡಹೆಸರಿನ ವ್ಯಾನ್​ ಡ್ಯಾಮ್​ 1990ರ ದಶಕದಲ್ಲಿ ಪ್ರಮುಖ ಆಕ್ಷನ್ ನಟರಾಗಿದ್ದರು. ಈ ಹಿಂದೆ ಮಾದಕಸ್ತು ಆರೋಪಗಳಿಗಾಗಿ ಕಾನೂನು ಕ್ರಮ ಎದುರಿಸಿದ್ದಾರೆ. ಅವರು 1979 ರಲ್ಲಿ ಯುರೋಪಿಯನ್ ಕರಾಟೆ ಚಾಂಪಿಯನ್‌ಶಿಪ್ ಗೆದ್ದ ಬೆಲ್ಜಿಯಂ ಕರಾಟೆ ತಂಡದ ಸದಸ್ಯರಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net