

ನವದೆಹಲಿ: ದೇಶವನ್ನಾಳುವವರೇ ಆಗಿರಲಿ ಅಥವಾ ಕೂಲಿ ಕಾರ್ಮಿಕನೇ ಆಗಿರಲಿ, ಅವರವರ ಶ್ರೀಮತಿಯ ಮಾತು ಕೇಳಬೇಕಾಗಿರುವುದು ಅತಿ ಮುಖ್ಯ. ಹೆಂಡತಿಯ ಮಾತು ಕೇಳದೆ, ಒಬ್ಬರೇ ಹೋಗಿ ಕರೊನಾ ಲಸಿಕೆ ಪಡೆದು ಬಂದ ಪ್ರಸಿದ್ಧ ವೈದ್ಯರಿಗೆ ಅವರ ಪತ್ನಿ ಕ್ಲಾಸ್ ತೆಗೆದುಕೊಂಡು ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.
ಪದ್ಮಶ್ರೀ ಪುರಸ್ಕೃತ ಹೃದ್ರೋಗ ತಜ್ಞ ಕೆಕೆ ಅಗರ್ವಾಲ್ ಸೋಮವಾರದಂದು ಕರೊನಾ ಲಸಿಕೆ ಪಡೆದಿದ್ದಾರೆ. ಹೆಂಡತಿ, ಮಗನೊಂದಿಗೆ ಹೋಗಿ ಲಸಿಕೆ ತೆಗೆದುಕೊಳ್ಳಬೇಕಾದ ಅವರು ಅವರಿಬ್ಬರನ್ನು ಬಿಟ್ಟು ಒಬ್ಬರೇ ಹೋಗಿ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು ವಾಪಾಸು ಬರುವಾಗ ಲಸಿಕೆ ಪಡೆದ ನಂತರ ಹೇಗಿರುತ್ತದೆ ಎನ್ನುವುದನ್ನು ಲೈವ್ನಲ್ಲಿ ಹೇಳುತ್ತಿದ್ದರು. ಅಷ್ಟರಲ್ಲಾಗಲೇ ಲೈವ್ ವಿಡಿಯೋವನ್ನು ನೋಡಿದ ಅವರ ಪತ್ನಿ ತಟ್ಟನೆ ಅವರಿಗೆ ಕರೆ ಮಾಡಿದ್ದಾರೆ.
ನನ್ನ ಬಿಟ್ಟು ಅದೇಗೆ ಒಬ್ಬರೇ ಕರೊನಾ ಲಸಿಕೆ ತೆಗೆದುಕೊಂಡು ಬಂದಿರಿ ಎಂದು ವಿಚಾರಿಸಲು ಆರಂಭಿಸಿದ್ದಾರೆ. ಲಸಿಕೆ ಯಾವಾಗ ತೆಗೆದುಕೊಳ್ಳಬಹುದು ಎಂದು ಕೇಳಲು ಹೋಗಿದ್ದೆ. ಅವರು ಈಗಲೇ ಖಾಲಿ ಇದೆ, ತೆಗೆದುಕೊಳ್ಳಿ ಎಂದು ಕೊಟ್ಟರು ಎಂದು ಅಗರ್ವಾಲ್ ಹೇಳಿದ್ದಾರೆ. ಅದನ್ನೆಲ್ಲ ಒಪ್ಪದ ಅವರ ಪತ್ನಿ ನನ್ನ ಬಳಿ ಸುಳ್ಳು ಹೇಳಬೇಡಿ ಎಂದು ರೇಗಾಡಿದ್ದಾರೆ. ಇಷ್ಟೆಲ್ಲ ಸಂಭಾಷಣೆ ಅವರು ಲೈವ್ನಲ್ಲಿ ಇದ್ದಾಗಲೇ ಆಗಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಯಾವುದೇ ಸ್ಥಾನದಲ್ಲಿದ್ದರೂ ಹೆಂಡತಿಯ ಮಾತು ಕೇಳುವುದು ಅತ್ಯಗತ್ಯ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)