ಜನರಿಗೆ ಬೇಕಾಗಿರುವುದು ಅಕ್ಕಿ ಹಣ ಅಲ್ಲ; ಸಿ.ಟಿ. ರವಿ ಹೇಳಿಕೆಗೆ ಸಚಿವ ಜಾರ್ಜ್​ ತಿರುಗೇಟು

KJ George
Published on

ಚಿಕ್ಕಮಗಳೂರು: ಅನ್ನಭಾಗ್ಯ ಯೋಜನೆ ಜಾರಿ ಕುರಿತಂತೆ ಬಿಜೆಪಿ-ಕಾಂಗ್ರೆಸ್​ ನಾಯಕರ ನಡುವಿನ ವಾಕ್ಸಮರ ಜೋರಾಗಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಇಂದನ ಸಚಿವ ಕೆ.ಜೆ. ಜಾರ್ಜ್​ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಜಾರ್ಜ್​ ಜನರಿಗೆ ಬೇಕಾಗಿರುವುದು ಅಕ್ಕಿಯೇ ಹೊರತು ಹಣವಲ್ಲ ಎಂಬುದನ್ನು ಸಿ.ಟಿ. ರವಿ ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಟಾಂಗ್​ ಕೊಟ್ಟಿದ್ದಾರೆ.

ಅಕ್ಕಿ ಬದಲು ಹಣ ಕೊಡಿ ಎನ್ನುವುದು ಸರಿಯೇ

ನಾವು ಅಕ್ಕಿಯನ್ನು ಉಚಿತವಾಗಿ ಕೇಳುತ್ತಿಲ್ಲ. ಅದಕ್ಕೆ ಖರ್ಚಾಗುವ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. FCIನವರು ಮೊದಲಿಗೆ ನಮ್ಮ ಬಳಿ ಅಕ್ಕಿ ಸ್ಟಾಕ್​ ಇದೆ ಕೊಡುತ್ತೇವೆ ಎಂದು ಹೇಳಿದ್ದರು. ಆ ನಂತರ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಹೇಳಿ ಉಲ್ಟಾ ಹೊಡೆದಿದ್ದಾರೆ.

CT Ravi George

ಜನರಿಗೆ ಅಕ್ಕಿ ಕೊಡುವ ಬದಲು ಹಣ ಹಾಕಿ ಎನ್ನುತ್ತೀರಲ್ಲ ಸಿ.ಟಿ. ರವಿ ಅವರೇ ನಾವೇನು ಉಚಿತವಾಗಿ ಕೇಳಿಲ್ಲ. ಬದಲಾಗಿ ಅದಕ್ಕೆ ತಗಲುವ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದೇವೆ. ಹಾಗಿದ್ದರೂ ನೀವು ಅಕ್ಕಿಯನ್ನು ಜನರಿಗೆ ಕೊಡದೆ ಕೊಳೆಸಲು ಮುಂದಾಗಿರುವುದು ದ್ವೇಷ ರಾಜಕಾರಣ ಅಲ್ಲದೇ ಇನ್ನೇನು ಎಂದು ಪ್ರಶ್ನಿಸಿದ್ದಾರೆ.

ದೋಷಗಳನ್ನು ಸರಿ ಮಾಡಲಾಗಿದೆ

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಹಿಂಪಡೆದ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ಮಾಡಿದ ತಪ್ಪುಗಳನ್ನು ಸರಿಪಡಿಸಲಾಗಿದೆ. ಅದರಲ್ಲಿ ಬೇರೇನೂ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಮೊದಲೇ ಇತ್ತು. ಬಲವಂತ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು ಎಂದು ಈ ಹಳೇ ಕಾಯ್ದೆಯಲ್ಲಿತ್ತು.

ಬಿಜೆಪಿಯವರು ಈ ಹಿಂದೆ ಆರೋಪಿತರು ಸಾಕ್ಷಿಗಳನ್ನು ಒದಗಿಸಬೇಕು ಎಂಬಿತ್ಯಾದಿ ದೋಷಪೂರಿತ ಸೆಕ್ಷನ್​ಗಳನ್ನು ಸೇರಿಸಿತ್ತು. ಅವುಗಳನ್ನು ತೆಗೆದು ಹಾಕಲಾಗಿದೆ. ಈ ಕಾಯ್ದೆ ಜಾರಿಗೆ ತಂದು ಬಿಜೆಪಿ ಸಾಧಿಸಿದ್ದೇನು. ಇಲ್ಲಿಯಬರೆಗೂ ಎಷ್ಟು ಪ್ರಕರಣಗಳನ್ನು ದಾಖಲಿಸಿದೆ ಎಂದು ಪ್ರಶ್ನಿಸಿದ್ದಾರೆ.

ಎಲ್ಲರಿಗೂ ಸಮಾನ ಹಕ್ಕು ನೀಡುವ ಕಾಯ್ದೆಯನ್ನು ಜಾರಿ ಮಾಡುತ್ತೇವೆ. ಅದು ಕಾಂಗ್ರೆಸ್ಸಿನವರ ಜವಾಬ್ದಾರಿ. ಬಿಜೆಪಿಯವರು ನಮ್ಮ ಪ್ರತಿಯೊಂದು ಹೆಜ್ಜೆಗೂ ವಿರೋಧಿಸುತ್ತಿದ್ದಾರೆ. ಆದ್ದರಿಂದ ಅವರು ಪ್ರತ್ರಿಪಕ್ಷ ಅಲ್ಲ ವಿರೋಧ ಪಕ್ಷ ಮಾತ್ರ ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net