

‘ಭರ್ಜರಿ ಗಂಡು’ ಮುಗಿಯುತ್ತಿದ್ದಂತೆಯೇ, ಅದೇ ತಂಡದೊಂದಿಗೆ ‘ಕನ್ನಡತಿ’ ಖ್ಯಾತಿಯ ಕಿರಣ್ ರಾಜ್ ಇನ್ನೊಂದು ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದಕ್ಕೆ ಸರಿಯಾಗಿ ಆ ಚಿತ್ರ ಬಿಡುಗಡೆಗೂ ಮುನ್ನವೇ, ಅದೇ ನಿರ್ದೇಶಕರೊಂದಿಗೆ ಕಿರಣ್ ನಟಿಸುತ್ತಿರುವ ಹೊಸ ಚಿತ್ರ ಬುಧವಾರ ಪ್ರಾರಂಭವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು ‘ಶೇರ್’. ‘ಶೇರ್’ ಎಂದರೆ ಹಿಂದಿಯಲ್ಲಿ ಹುಲಿ ಎಂದರ್ಥ.
ಈಗಾಗಲೇ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಹುಲಿ ಹೆಸರಿನ ಚಿತ್ರಗಳು ಸಾಕಷ್ಟು ಬಂದಿರುವುದರಿಂದ, ಅವೆರಡೂ ಭಾಷೆಗಳನ್ನು ಬಿಟ್ಟು ಹಿಂದಿ ಭಾಷೆಯ ಪದದ ಮೊರೆ ಹೋಗಿದೆ ಚಿತ್ರತಂಡ. ಬೀದರ್ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿರುವ ಸುದರ್ಶನ್ ಸುಂದರ್ರಾಜ್ ಈ ಚಿತ್ರ ನಿರ್ವಿುಸಿದರೆ, ಪ್ರಸಿದ್ಧ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಇದೊಂದು ಪಕ್ಕಾ ಆಕ್ಷನ್ ಚಿತ್ರವಂತೆ. ಅನಾಥನೊಬ್ಬನ ಕುರಿತಾದ ಈ ಚಿತ್ರವು ಹೆಚ್ಚಾಗಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಸಾಗುತ್ತದಂತೆ. ಈ ಚಿತ್ರದಲ್ಲಿ ಕಿರಣ್ ರಾಜ್ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಕಿಕ್ ಬಾಕ್ಸಿಂಗ್ ಮತ್ತು ಮಾರ್ಷಲ್ ಆರ್ಟ್ಸ್ ಅಭ್ಯಾಸ ಮಾಡಿದ್ದಾರಂತೆ. ಚಿತ್ರೀಕರಣ ಆಗಸ್ಟ್ 22ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಖುಷಿಯಿಂದ ಹೇಳಿಕೊಳ್ಳೂವ ಕಿರಣ್, ‘ಚಿತ್ರಕ್ಕಾಗಿ ಸಮರಕಲೆಗಳನ್ನು ಅಭ್ಯಾಸ ಮಾಡುತ್ತಿದ್ದೇನೆ. ಸಾಹಸ ಸನ್ನಿವೇಶಗಳಿಗೆ ಇಲ್ಲಿ ಹೆಚ್ಚು ಸ್ಕೋಪ್ ಇದೆ. ಕಥೆ ಮತ್ತು ನನ್ನ ಪಾತ್ರ ಎರಡೂ ಚೆನ್ನಾಗಿದೆ’ ಎನ್ನುತ್ತಾರೆ. ಕಿರಣ್ಗೆ ನಾಯಕಿಯಾಗಿ ಸುರೇಖಾ ಅಭಿನಯಿಸುತ್ತಿದ್ದು, ಇನ್ನೊಂದು ಪ್ರಮುಖ ಪಾತ್ರದಲ್ಲಿ ತನೀಶಾ ನಟಿಸುತ್ತಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಮತ್ತು ಗುಮ್ಮಿನೇನಿ ವಿಜಯ್ ಸಂಗೀತ ಈ ಚಿತ್ರಕ್ಕಿದೆ.