ಮೂಡಾ ಅಧಿಕಾರಿಗಳ ಗೈರಿಗೆ ಆಕ್ರೋಶ : ಕಿಲ್ಪಾಡಿ ಗ್ರಾಪಂ ಪ್ರಥಮ ಹಂತದ ಗ್ರಾಮಸಭೆ : ಭ್ರಷ್ಟಾಚಾರದ ಆರೋಪ

New Project (55)
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಗ್ರಾಮಸಭೆಗೆ ಬಾರದ ಮೂಡಾ ಅಧಿಕಾರಿಗಳು, ಪೊಲೀಸ್ ಬೀಟ್ ಅವ್ಯವಸ್ಥೆ, ಸಭೆಗೆ ಅಧಿಕಾರಿಗಳ ಗೈರು ಹಾಜರಿ, ಕುಮಾರ ಮಂಗಿಲ ದೇವಸ್ಥಾನದ ಬಳಿ ತೋಡಿನ ಹೂಳು ತೆಗೆಯದೆ ಕೃತಕ ನೆರೆ ಮತ್ತಿತರ ಗ್ರಾಮಸ್ಥರ ದೂರುಗಳ ಬಗ್ಗೆ ಕಿಲ್ಪಾಡಿ ಗ್ರಾಪಂ ಯ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಚರ್ಚೆ ನಡೆಯಿತು.

ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ವಲಯದಲ್ಲಿ ಮನೆ ಕಟ್ಟಲು ಸಮಸ್ಯೆಯಾದ ಮೂಡಾ 9-11 ಮತ್ತು ಕಾರ್ಮಿಕ ಇಲಾಖೆಯ ಸಮಸ್ಯೆಗಳು ಜ್ವಲಂತವಾಗಿದ್ದು ಗ್ರಾಮ ಸಭೆಗೆ ಮೂಡಾ ಅಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯ ಗೋಪಿನಾಥ ಬಡಂಗ ಮಾತನಾಡಿ, ಮೂಡಾ ಇಲಾಖೆ ಅಧಿಕಾರಿಗಳು ಯಾವ ಗ್ರಾಮ ಸಭೆಗೂ ಬರುತ್ತಿಲ್ಲ. ಅನುದಾನವನ್ನೂ ನೀಡುತ್ತಿಲ್ಲ. ಜನರಿಗೆ ಸಮಸ್ಯೆ ಉಂಟುಮಾಡುವ ಅದು ಭ್ರಷ್ಟಾಚಾರದ ಕೊಂಪೆ ಎಂದು ಆರೋಪಿಸಿದರು.

ಪಂಚಾಯಿತಿ ಸದಸ್ಯ ಗೋಪಿನಾಥ ಬಡಂಗ ಮಾತನಾಡಿ, ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಗೆ ಪಂಚಾಯಿತಿ ಜನಪ್ರತಿನಿಧಿಗಳನ್ನು ಆಹ್ವಾನಿಸದೆ ಕೇವಲ ಹೊಯ್ಗೆ ಮಾಫಿಯಾ, ಕೋಳಿ ಅಂಕ ನಿರ್ವಾಹಕರನ್ನು ಮಾತ್ರ ಪೊಲೀಸರು ಕರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿ ಹರಿಶೇಖರ್ ಮಾತನಾಡಿ, ಜನರು ಸಾಮಾಜಿಕ ಜಾಲತಾಣ, ಡಿಜಿಟಲ್ ಅರೆಸ್ಟ್ ಬಗ್ಗೆ ಎಚ್ಚರ ವಹಿಸಿ ಎಂದರು.

ಸಭೆಗೆ ಗೈರು ಹಾಜರಾದ ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯ ಕರೆಕಾಡುವಿನಲ್ಲಿ ಅಂಗನವಾಡಿ ಶಾಲೆ ಬಗ್ಗೆ ಬೇಡಿಕೆ ವ್ಯಕ್ತಪಡಿಸಲಾಯಿತು.

ನೋಡಲ್ ಅಧಿಕಾರಿ ಪ್ರವೀಣ ಕುಮಾರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಜತೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ವ್ಯವಸ್ಥೆ ಬಗ್ಗೆ ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು. ಪಂಚಾಯಿತಿ ಉಪಾಧ್ಯಕ್ಷೆ ದಮಯಂತಿ ಮಾತನಾಡಿ, ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ನಿಯಮ ಸರ್ಕಾರ ಮಾಡಿದರೆ ಮಾತ್ರ ಶಾಲೆ ಕನ್ನಡ ಶಾಲೆಗಳನ್ನು ಉಳಿಸಲು ಸಾಧ್ಯ ಎಂದರು.

ಖಾತಾ ಬದಲಾವಣೆ ಸರಳ ರೂಪದಲ್ಲಿದ್ದು ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಿ ಎಂದು ಕಂದಾಯ ಇಲಾಖೆ ಅಧಿಕಾರಿ ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ವಸತಿ ಯೋಜನೆ ಹಾಗೂ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಪಂಚಾಯಿತಿ ಸದಸ್ಯರಾದ ಗೋಪಿನಾಥ ಪಡಂಗ, ಶಾಂತಾ, ಲೀಲಾವತಿ ರಾಜೇಶ್ ಹಾಗೂ ಗ್ರಾಮಸ್ಥರಾದ ಕೇಶವ ಸುವರ್ಣ, ಜಗನ್ನಾಥ ಕರ್ಕೇರ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

 ಕುಮಾರಮಂಗಿಲದಲ್ಲಿ ಕೃತಕ ನೆರೆ

ಪಂಚಾಯಿತಿ ವ್ಯಾಪ್ತಿಯ ಕುಮಾರಮಂಗಿಲ ದೇವಸ್ಥಾನದ ಬಳಿ ತೋಡಿನ ಹೂಳು ತೆಗೆಯದೆ ಕೃತಕ ನೆರೆ ಉಂಟಾಗುತ್ತಿದೆ. ಪರಿಸರದಲ್ಲಿ ವಿದ್ಯುತ್ ದೀಪ ಕೂಡ ಇಲ್ಲ. ಯಾವುದೇ ಮೂಲ ಸೌಕರ್ಯ ಒದಗಿಸಲು ಪಂಚಾಯಿತಿ ಮೀನಮೇಷ ಎಣಿಸುತ್ತಿದೆ ಎಂದು ಗ್ರಾಮಸ್ಥ ಚಂದ್ರಶೇಖರ ಮಯ್ಯ ಹಾಗೂ ಲೋಲಾಕ್ಷಿ ದೂರಿದರು. ಭಾರಿ ಗಾಳಿ-ಮಳೆಗೆ ಕೆಂಚನಕೆರೆ ಶಾಲೆ ತಡೆಗೋಡೆ ಕುಸಿದಿದ್ದು ಶೀಘ್ರ ನಿರ್ಮಾಣ, ಕೆಂಚನಕೆರೆ ಉಪ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನೇಮಕ, ಸರ್ಕಾರಿ ಶಾಲೆ ಮಕ್ಕಳಿಗೆ ಬಟ್ಟೆ ಹೊಲಿಸಿ ಕೊಡಬೇಕು. ಮೂಲ್ಕಿ ಪಶುವೈದ್ಯ ಆಸ್ಪತ್ರೆಗೆ ಕಾಯಂ ವೈದ್ಯಾಧಿಕಾರಿ ಬೇಕು. ಕೃಷಿ ಇಲಾಖೆ ಕಚೇರಿಯಲ್ಲಿ ರಸಗೊಬ್ಬರ ಸಿಗುತ್ತಿಲ್ಲ. ಬೀದಿ ನಾಯಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ..ಇತ್ಯಾದಿ ವಿಷಯಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು.

ಅಡ್ಡನಿಂತು ಲಿಫ್ಟ್‌ಗಾಗಿ ಪೀಡಿಸುವ ಮಕ್ಕಳು

ಮಳೆ ಆರಂಭಗೊಂಡ ಬಳಿಕ ಗ್ರಾಮೀಣ ವಲಯದಲ್ಲಿ ಆಗಂತುಕ ವ್ಯಕ್ತಿಗಳ ಚಲನವಲನ ಸಹಿತ ಕಳ್ಳರ ಕಾಟ ವಿಪರೀತವಾಗಿದ್ದು ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ರಾಜ್ಯ ಹೆದ್ದಾರಿಯ ಕಾರ್ನಾಡಿ, ಕಿಲ್ಪಾಡಿ ಪಂಚಾಯಿತಿ ಬಳಿ ಅಪ್ರಾಪ್ತ ಶಾಲಾ ಮಕ್ಕಳು ಮೂರು ಜನರನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿ ಎರ‌್ರಾ ಬಿರ‌್ರಿ ಚಲಾಯಿಸಿ ಭೀತಿ ಹುಟ್ಟಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ದಾರಿಯಲ್ಲಿ ಅಡ್ಡ ನಿಂತು ಲಿಫ್ಟ್‌ಗಾಗಿ ವಾಹನ ಚಾಲಕರನ್ನುಪೀಡಿಸುತ್ತಿರುವುದು ನಿಯಂತ್ರಣಕ್ಕೆ ಬರಬೇಕು. ಬೆಳಗಿನ ಜಾವ ಹೆದ್ದಾರಿಯಲ್ಲಿ ಕಲ್ಲು, ಹೊಯ್ಗೆ ಲಾರಿ ವೇಗದಿಂದ ಚಲಿಸುತ್ತಿದ್ದು ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net