

ಮುಂಬೈ: ನಿಸರ್ಗ ಚಂಡಮಾರುತ ಮಾಹಾರಾಷ್ಟ್ರದಲ್ಲಿ ಮೊದಲ ಬಲಿ ಪಡೆದಿದೆ. ತೀವ್ರವಾದ ಮಳೆ ಹಾಗೂ ಗಾಳಿಗೆ ವಿದ್ಯುತ್ ಕಂಬ ಉರುಳಿ 58 ವರ್ಷದ ವೃದ್ಧ ಬಲಿಯಾಗಿದ್ದಾನೆ.
ಅಲಿಬಾಗ್ನ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿ ವೃದ್ಧ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ರಾಯಗಡ ಜಿಲ್ಲೆಯಲ್ಲಿ ನೂರಾರು ಮರಗಳು ನೆಲಕ್ಕೆ ಉರುಳಿವೆ. ಕೆಲವು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಹೀಗಾಗಿ ಇಡೀ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅಲಿಬಾಗ್ನಲ್ಲಿ ಭೂಕುಸಿತ ಸಂಭವಿಸಿದೆ.
ಜಿಲ್ಲೆಯಲ್ಲಿ 85ಕ್ಕೂ ಅಧಿಕ ಬೃಹತ್ ಮರಗಳು ಮನೆಗಳ ಮೇಲೆ ಉರುಳಿವೆ. 11 ವಿದ್ಯುತ್ ಕಂಬಳು ನೆಲಕ್ಕೆ ಉರುಳಿವೆ. ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ ಜನರ ರಕ್ಷಣೆಗೆ ಧಾವಿಸಿದೆ. ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸುತ್ತಿದೆ.
ನಿಸರ್ಗ ಚಂಡ ಮಾರುತ ಅರಬ್ಬೀ ಸಮುದ್ರದಿಂದ ಮಹಾರಾಷ್ಟ್ರದತ್ತ ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. (ಏಜೆನ್ಸೀಸ್)