ಬಾಲಿವುಡ್​ ನಟರೊಂದಿಗೆ ದೀದಿ ಮಸ್ತ್​ ಡ್ಯಾನ್ಸ್​; ವಿಡಿಯೋ ವೈರಲ್

Didi Dance
Published on

ಕಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಆಯೋಜಿಸಿರುವ 29ನೇ ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (KIFF) ವರ್ಣರಂಜಿತ ಚಾಲನೆ ದೊರೆತ್ತಿದ್ದು, ಕಾರ್ಯಕ್ರಮಕ್ಕೆ ಬಾಲಿವುಡ್​ ಸೆಲೆಬ್ರಿಟಿಗಳ ದಂಡೇ ಹಾಜರಾಗಿದೆ. ಇತ್ತ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಲಿವುಡ್​ ನಟರ ಜೊತೆ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಜತೆ ನಿರ್ದೇಶಕ ಮಹೇಶ್​ ಭಟ್​, ನಟರಾದ ಸಲ್ಮಾನ್​ ಖಾನ್​, ಅನಿಲ್​ ಕಪೂರ್​, ಸೋನಾಕ್ಷಿ ಸಿನ್ಹಾ, ಶತ್ರುಘ್ನ ಸಿನ್ಹಾ, ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಜೊತೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಕಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (KIFF) 2023 ಥೀಮ್​ ಸಾಂಗ್​ಗೆ ಇವರೆಲ್ಲರೂ ಹೆಜ್ಜೆ ಹಾಕಿದ್ದಾರೆ.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಲ್ಮಾನ್​ ಖಾನ್​ ನಾನು ನೋಡಿದ ಅತಿ ದೊಡ್ಡ ಚಿತ್ರೋತ್ಸವಗಳಲ್ಲಿ ಇದೂ ಕೂಡ ಒಂದು. ನನಗೆ ಮಮತಾ ಬ್ಯಾನರ್ಜಿ ಅವರ ಬಗ್ಗೆ ಅಸೂಯೆ ಇದ್ದು, ಅಷ್ಟು ಚಿಕ್ಕ ಮನೆಯಲ್ಲಿ ಹೇಗೆ ವಾಸಿಸುತ್ತಿದ್ದಾರೆ ಎಂಬುದು ಈವರೆಗೆ ನನಗೆ ಅರ್ಥವಾಗಿಲ್ಲ ಎಂದ ಸಲ್ಮಾನ್​ ಬಳಿಕ ತಮ್ಮ ಚಿತ್ರದ ಡೈಲಾಗ್​ ಒಂದನ್ನು ಹೇಳುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದಾರೆ.

ಕಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು 1995ರಲ್ಲಿ ಶುರು ಮಾಡಲಾಯಿತು. ಬಂಗಾಳ ಚಿತ್ರರಂಗದ ಹಿರಿಯ ನಟರಾದ ಸತ್ಯಜಿತ್ ರೇ, ಋತ್ವಿಕ್ ಘಾಟಕ್, ಮೃಣಾಲ್ ಸೇನ್ ಮತ್ತು ನಿರ್ಮಾಪಕದರಿಂದ ಸ್ಪೂರ್ತಿ ಪಡೆದಿದ್ದು, ಕಾರ್ಯಕ್ರಮವನ್ನು ಡಿಸೆಂಬರ್​ 05ರಿಂದ 12ನೇ ತಾರೀಖಿನವರೆಗೂ ನಡೆಸಲಾಗುತ್ತದೆ. ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘ (FIAPF) ಗುರುತಿಸಿ ಅನುಮೋದನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net