ಪಕ್ಷಿ ನಿರೀಕ್ಷಕರನ್ನು ಕಾದು ನಿಂತಿದೆ ಕಿದೂರು

Published on

ಕುಂಬಳೆ: ಕೇರಳದ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆಯಲು ಹಾತೊರೆದು ನಿಂತಿದೆ ಕಿದೂರು ಪಕ್ಷಿ ಗ್ರಾಮ. ಕುಂಬಳೆ ಅರಿಕ್ಕಾಡಿಯಿಂದ 7 ಕಿ.ಮೀ. ಒಳಭಾಗದಲ್ಲಿರುವ ಪ್ರದೇಶವಾದ ಕಿದೂರು, ಕುಂಬಳೆ ಪಂಚಾಯಿತಿಯ ಪ್ರಥಮ ಪ್ರವಾಸಿ ತಾಣವಾಗಿದೆ. ಪಕ್ಷಿ ನಿರೀಕ್ಷಕರ, ಸಂಶೋಧಕರ ಪ್ರಿಯ ಕೇಂದ್ರವಾದ ಕಿದೂರಿನಲ್ಲಿ ಇದುವರೆಗೆ 152 ಬಗೆಯ ವಿವಿಧ ಪಕ್ಷಿಗಳನ್ನು ಪತ್ತೆ ಮಾಡಲಾಗಿದೆ. ವಂಶ ನಾಶದ ಭೀತಿಯಲ್ಲಿರುವ ಬೂದು ತಲೆಯ ಬುಲ್‌ಬುಲ್, ಬಿಳಿ ಕಿರೀಟದ ಕೊಕ್ಕರೆ, ನೀರುಕಾಗೆ, ಬೆಳ್ಳಕ್ಕಿ, ಕತ್ತಿ ಕೊಕ್ಕರೆ ಮೊದಲಾದ 38 ವಿಧದ ವಲಸೆ ಹಕ್ಕಿ ಕಂಡುಬಂದಿವೆ.

ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕೊಂಬಿನ ಕೋಗಿಲೆ, ಬೂದು ತಲೆಯ ಬುಲ್‌ಬುಲ್, ಗರುಡ ಪಿಕಳಾರ, ಕೆಂಪು ತಲೆ ಹಕ್ಕಿ, ಬೂದು ಪಟ್ಟಿಯ ಪಾರಿವಾಳ ಇಲ್ಲಿ ಕಂಡು ಬರುತ್ತವೆ. ಭಾರತದ ಈ ಪ್ರದೇಶದಲ್ಲಿ ಮಾತ್ರ ಕಂಡು ಬರುವ ಹಳದಿ ಪಟ್ಟಿಯ ಪಾರಿವಾಳ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. ವಿಶ್ವದ ಅತಿದೊಡ್ಡ ಪಕ್ಷಿ ದತ್ತಾಂಶ ಸಂಗ್ರಹವಾದ ’ಇಬರ್ಡ್ಸ್’ ನಲ್ಲಿ ಈ ಪ್ರದೇಶದಲ್ಲಿ ಕಂಡುಬಂದ ವಿವಿಧ ಪಕ್ಷಿ ಪ್ರಭೇದ ನೋಂದಾಯಿಸಲಾಗಿದೆ. ಅಲ್ಲದೆ ಹೆಚ್ಚಿನ ಪ್ರಭೇದ ಪತ್ತೆಹಚ್ಚಲು ನಿರೀಕ್ಷಣೆ ನಡೆಯುತ್ತಿವೆ.

ಎಲ್ಲಾ ಸಮಯದಲ್ಲೂ ನೀರು ಒದಗಿಸುವ ಕಾಜೂರು ಪಳ್ಳ(ಹಳ್ಳ) ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಪಕ್ಷಿ ವೀಕ್ಷಕರು, ಸಂಶೋಧಕರು ಅನೇಕ ಸ್ಥಳಗಳಿಂದ ಇಲ್ಲಿಗೆ ಬರುತ್ತಿರುವುದರಿಂದ, ವಸತಿ ಸೌಕರ್ಯ ಸುಧಾರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 60 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸಿ ನಿಲಯ ನಿರ್ಮಿಸಲಾಗುತ್ತಿದೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಾಸದ ಕೊಠಡಿ, ಸಭಾಂಗಣ, ಶೌಚಾಗೃಹ, ಅಡುಗೆಮನೆ, ಕಚೇರಿ ಕೊಠಡಿಯಂತಹ ಎಲ್ಲಾ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವಸತಿ ನಿಲಯದ ನಿರ್ಮಾಣ ಅಂತಿಮ ಹಂತದಲ್ಲಿದೆ. ಶೀಘ್ರ ಇದರ ಉದ್ಘಾಟನೆ ನಡೆಯಲಿದೆ ಎಂದು ಅಧಿಕೃತರು ತಿಳಿಸಿದ್ದಾರೆ.

ಈ ಯೋಜನೆ ಜಾರಿಗೆ ಬರುವುದರೊಂದಿಗೆ ಕಿದೂರು ಕೇರಳ ಮಾತ್ರವಲ್ಲದೆ, ವಿವಿಧ ಭಾಗಗಳ ಪಕ್ಷಿ ವೀಕ್ಷಕರು, ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆ ಕೇಂದ್ರವಾಗಿ ಪರಿವರ್ತನೆಯಾಗುವುದು. 50 ಜನರಿಗೆ ಉಳಿದುಕೊಳ್ಳಲು ಸಾಧ್ಯವಿರುವ ವಸತಿ ನಿಲಯ ನಿರ್ಮಿಸಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ಮಾಣದ ಜವಾಬ್ದಾರಿ ಹೊಂದಿದೆ.

ಪರಿಸರ ಪ್ರವಾಸೋದ್ಯಮ ಕೇಂದ್ರ

ಕಿದೂರು ಪಕ್ಷಿ ಗ್ರಾಮ ಒಂದು ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮಿದರೆ, ಸುತ್ತಮುತ್ತಲಿನ ಪ್ರದೇಶಗಳಾದ ಆರಿಕ್ಕಾಡಿ ಕೋಟೆ, ಅನಂತಪುರ ಸರೋವರ ದೇವಾಲಯ ಪ್ರವಾಸಿಗರ ಆಕರ್ಷಣೆ ಕೇಂದ್ರಗಳಾಗಿ ಇನ್ನಷ್ಟು ಬಲಗೊಳ್ಳಲಿದೆ. ಕಿದೂರು ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ‘ಪರಿಸರ ಪ್ರವಾಸೋದ್ಯಮ ಕೇಂದ್ರ’ ವಾಗಿ ಘೋಷಿಸುವ ಪ್ರಯತ್ನ ಪ್ರಗತಿಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net