

ಪಟನಾ: ಮಕ್ಕಳಿಗೆ ಚಾಕಲೇಟ್ ಆಸೆ ತೋರಿಸಿ, ತುಂಬಿದ ಎಲ್ಪಿಜಿ ಸಿಲೆಂಡರ್ ಗ್ಯಾಸ್ಗಳನ್ನು ನದಿಯ ಒಂದು ದಡದಿಂದ-ಇನ್ನೊಂದು ದಡಕ್ಕೆ ಸಾಗಿಸಿಕೊಳ್ಳುವ ಕ್ರೂರ ಘಟನೆ ಬಿಹಾರದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ.
ಬಿಹಾರದ ಕಠಿಹಾರ ಜಿಲ್ಲೆಯಲ್ಲಿರುವ ಹಾಸನ್ಗಂಜನ್ನಲ್ಲಿ ಭಾಸ್ನಾ ನದಿ ಹರಿಯುತ್ತದೆ. ಈ ಪ್ರದೇಶದ ಸ್ಥಳೀಯ ಮಕ್ಕಳು ನದಿ ನೀರಿನಲ್ಲಿ ಮನಸೋ ಇಚ್ಛೆ ಈಜುತ್ತಾರೆ. ಅದರಲ್ಲೂ ಬೇಸಿಗೆ ಬಂತೆಂದರೆ ಹೆಚ್ಚು ಸಮಯ ನೀರಿನಲ್ಲಿಯೇ ಕಳೆಯುತ್ತಿರುತ್ತಾರೆ. ಆದರೆ ಆ ಹಳ್ಳಿಯ ಕೆಲವು ದೊಡ್ಡ ಜನರು ಮಕ್ಕಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗೋ ಕಳ್ಳ ಸಾಗಾಟ ತಡೆಗೆ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ಗೆ ಕೊಲೆ ಬೆದರಿಕೆ
ಈ ನದಿಯಿಂದ ಆಚೆ ಇರುವ ಹಳ್ಳಿಗಳು ಇತ್ತ ಭಾಗಕ್ಕೆ ಬರಲು ದೋಣಿಯನ್ನು ಬಳಸುತ್ತಾರೆ. ಹಾಗಾಗಿ ಇಲ್ಲಿ ಒಂದಷ್ಟು ಜನರು ದೋಣಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ದೋಣಿ ಮಾಲೀಕರು ಒಬ್ಬರಿಗೆ 20 ರೂ.ನಂತೆ ಹಣ ಪಡೆಯುತ್ತಾರೆ. ಆದರೆ ಎಲ್ಪಿಜಿ ಸಿಲೆಂಡರ್ ದೋಣಿಯಲ್ಲಿ ಹಾಕಿ, ಸಾಗಿಸಬೇಕು ಎಂದರೆ ಹೆಚ್ಚುವರಿ ಅಂದರೆ ಮತ್ತೂ 20 ರೂ. ಕೊಡಬೇಕು.
ಕೆಲವರು ಅಂಬಿಗ ಕೇಳಿದಷ್ಟು ಹಣ ಕೊಟ್ಟು, ಗ್ಯಾಸ್ ಸಿಲಿಂಡರ್ನ್ನು ದೋಣಿಯಲ್ಲಿಯೇ ಸಾಗಿಸುತ್ತಾರೆ. ಆದರೆ ಮತ್ತೆ ಕೆಲವರು ಆ ಹಣವನ್ನು ಉಳಿಸುತ್ತಾರೆ. ತಾವು ದೋಣಿಯಲ್ಲಿ ಹೋಗಿ, ನದಿಯಲ್ಲಿ ಆಡುವ ಮಕ್ಕಳ ಕೈಯಲ್ಲಿ ತುಂಬಿದ ಸಿಲಿಂಡರ್ನ್ನು ಮತ್ತೊಂದು ದಡಕ್ಕೆ ಸಾಗಿಸುತ್ತಾರೆ. ನೀವು ಈ ಸಿಲಿಂಡರ್ನ್ನು ಆಚೆ ದಡಕ್ಕೆ ಕೊಂಡೊಯ್ದರೆ ಚಾಕಲೇಟ್ ಕೊಡುತ್ತೇವೆ ಎನ್ನುತ್ತಾರೆ. ಬಡ ಮಕ್ಕಳು ಆಸೆಗೆ ಬಿದ್ದು, ಅಷ್ಟು ಭಾರದ ಸಿಲಿಂಡರ್ನ್ನು ಹೊತ್ತು ನದಿ ದಾಟುತ್ತಾರೆ. ಇದನ್ನೂ ಓದಿ: ಬಹುದೊಡ್ಡ ಪ್ರಮಾದ ಮಾಡಿ, ಬಳಿಕ ಭಾರತೀಯ ಹಿಂದುಗಳ ಕ್ಷಮೆ ಕೋರಿದ ಇಸ್ರೇಲ್ ಪ್ರಧಾನಿಯ ಹಿರಿಯ ಮಗ…
ಇವರೆಲ್ಲ ಮಕ್ಕಳು. ಅವರಿಗೆ ಹೀಗೆ ಸಿಲಿಂಡರ್ನ್ನು ತಾವು ತೆಗೆದುಕೊಂಡು ಹೋಗುವುದರಿಂದ ಅಪಾಯ ಆಗಬಹುದು ಎಂಬುದೆಲ್ಲ ತಿಳಿಯುವುದಿಲ್ಲ. ಚಾಕಲೇಟ್ ಸಿಗುತ್ತದಲ್ಲ ಎಂಬ ಒಂದೇ ಆಸೆಗೆ ಬಿದ್ದು, ನೀರಿನಲ್ಲಿ ಸಿಲಿಂಡರ್ ಎಳೆಯುತ್ತ, ನೂಕುತ್ತ ಸಾಗುತ್ತಾರೆ.
ವಿಡಿಯೋವೊಂದು ವೈರಲ್ ಆದ ಬಳಿಕ ರಾಷ್ಟ್ರೀಯ ಮಾಧ್ಯಮವೊಂದು ಮಕ್ಕಳನ್ನು ಸಂಪರ್ಕಿಸಿ ಪ್ರಶ್ನೆ ಮಾಡಿದೆ. ಆಗ ಅವರು ತುಂಬ ಮುಗ್ಧತೆಯಿಂದ, ಚಾಕಲೇಟ್ ಕೊಡುತ್ತೀವಿ ಎನ್ನುತ್ತಾರೆ. ನಾವು ಸಿಲಿಂಡರ್ ಸಾಗಿಸಿದ ಮೇಲೆ ಎಷ್ಟೋ ಜನ ಹಾಗೇ ಹೋಗಿಬಿಡುತ್ತಾರೆ. ಹೇಳಿದ್ದನ್ನು ಕೊಡುವುದೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಮತ್ತೊಂದಷ್ಟು ಜನ ದುಡ್ಡು ಕೊಡುತ್ತೇವೆ ಎನ್ನುತ್ತಾರೆ. ಆಮೇಲೆ ನಮ್ಮ ಕಡೆಗೆ ನೋಡದೆ ಹೋಗುತ್ತಾರೆ ಎಂದೂ ಮಕ್ಕಳು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)