

ಸುಳ್ಯ: ಅಜ್ಜಾವರದ ಕಾಟಿಪಳ್ಳದಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಕಾರಿನಲ್ಲಿ ಬಂದವರು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿದ್ದು, ಬಾಲಕ ಸುಳ್ಳು ಹೇಳಿದ್ದೆಂದು ಪೊಲೀಸ್ ತನಿಖೆಯಿಂದ ಖಚಿತಗೊಂಡಿದೆ.
ಅಜ್ಜಾವರ ಕಾಟಿಪಳ್ಳದ ಕುಶಲ ಎಂಬುವರ ಪುತ್ರ ದೀನ್ರಾಜ್(17) ಜುಲೈ 6ರಂದು ಮಧ್ಯಾಹ್ನ ಮನೆಯಿಂದ ಮೇನಾಲದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಕಾರಿನಲ್ಲಿ ಬಂದವರು ಬಲವಂತವಾಗಿ ಕಾರಿನೊಳಗೆ ಹತ್ತಿಸಿದರೆಂದೂ, ಬಳಿಕ ತಾನು ಕಾರಿನಲ್ಲಿದ್ದ ಒಬ್ಬನಿಗೆ ಎರಡೇಟು ನೀಡಿ, ಡೋರ್ ತೆಗೆದು ತಪ್ಪಿಸಿಕೊಂಡಿದ್ದಾಗಿ ಮನೆಯವರಿಗೆ ತಿಳಿಸಿದ್ದನು.
ಬಾಲಕನ ಮಾತಿನಿಂದ ಆತಂಕಗೊಂಡ ಆತನ ತಂದೆ ಸುಳ್ಯ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಆತ ಸುಳ್ಳು ಹೇಳಿರುವುದಾಗಿ ತಿಳಿದು ಬಂದಿದೆ. ಬಾಲಕ ನೀಡಿದ ಮಾಹಿತಿಯಿಂದ ಸಾಮಾಜಿಕ ಜಾಲತಾಣದಲ್ಲಿ ‘ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ’ ಎಂದೆಲ್ಲ ಸುದ್ದಿ ಹಬ್ಬಿತ್ತು.