‘ಕಿಕ್ ಡ್ರಗ್ಸ್’ ಅಭಿಯಾನಕ್ಕೆ ಕಾಸರಗೋಡಿನಿಂದ ಚಾಲನೆ

4
Published on

ಕಾಸರಗೋಡು: ರಾಜ್ಯ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಆಯೋಜಿಸಿರುವ ‘ಕಿಕ್ ಡ್ರಗ್ಸ್’ ಮಾದಕ ದ್ರವ್ಯ ಮುಕ್ತ ಅಭಿಯಾನದ ರಾಜ್ಯಮಟ್ಟದ ಪ್ರಚಾರ ಅಭಿಯಾನ ಉದ್ಘಾಟನೆ ಕಾಸರಗೋಡಿನಲ್ಲಿ ಸೋಮವಾರ ಜರುಗಿತು.

ಜಿಲ್ಲಾಧಿಕಾರಿ ಕಚೇರಿ ವಠಾರದಿಂದ ಕಾಸರಗೋಡು ಹೊಸ ಬಸ್ ನಿಲ್ದಾಣವರೆಗೆ ಆಯೋಜಿಸಲಾಗಿದ್ದ ವ್ಯಾರಥಾನ್‌ಗೆ ಸಚಿವ ಅಬ್ದುಲ್ ರಹಮಾನ್ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಚಿವರು ಸಿವಿಲ್ ಸ್ಟೇಶನ್ ವಠಾರದ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆಗೈದರು.

ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‌ಲೈನ್ ಮೂಲಕ ಉದ್ಘಾಟಿಸಿದರು. ಕ್ರೀಡಾ ಸಚಿವ ವಿ.ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರೆಹವಾನ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಬೋಧಿಸಿದರು. ತೃಕರಿಪುರ ಶಾಸಕ ಎಂ.ರಾಜಗೋಪಾಲನ್, ಉದುಮ ಶಾಸಕ ಸಿ.ಎಚ್.ಕುಂಞಂಬು, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್, ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ, ರಾಜ್ಯ ಕ್ರೀಡಾ ಮಂಡಳಿ ಅಧ್ಯಕ್ಷ ಯು.ಶರಫಲಿ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಜಗದೀಶ್ ಕುಂಬಳೆ ಮೊದಲಾದವರಿದ್ದರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕಷ್ಣನ್ ಸ್ವಾಗತಿಸಿದರು. ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯದರ್ಶಿ ಪ್ರದೀಪನ್ ಎ.ವಿ. ವಂದಿಸಿದರು.

ನೃತ್ಯ ಶಿಲ್ಪ, ಜುಂಬಾ ನೃತ್ಯ ಪ್ರದರ್ಶನ

ಖೇಲೋ ಇಂಡಿಯಾ ವಿದ್ಯಾರ್ಥಿಗಳು ಹಾಗೂ ಚೆರುವತ್ತೂರು ಕೈರಳಿ ಪೂರಕ್ಕಳಿ ತಂಡದಿಂದ ಫೆನ್ಸಿಂಗ್ ಕಾರ್ಯಕ್ರಮ ನಡೆಯಿತು. ಚೆರುವತ್ತೂರು ಕೈರಳಿ ಕಲರಿ ಸಂದಿಂದ ಪೂರಕಳ್ಳಿ ಮತ್ತು ಕಲರಿಪಯಟ್ಟು, ಯೋಗ ಸಂದಿಂದ ಯೋಗ, ತಾಯ್ಕಂಡೋ ಅಸೋಸಿಯೇಷನ್ ವತಿಯಿಂದ ತೈಕೊಂಡೋ, ವ್ಯಸನ ವಿರುದ್ಧ ನೃತ್ಯ ಶಿಲ್ಪ, ಜುಂಬಾ ನೃತ್ಯ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net