

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ‘ಪಾಕಶಾಲ’ 35 ನೇ ಔಟ್‌ಲೆಟ್ ಮಂಗಳೂರು ಕೆಎಸ್ ರಾವ್ ರಸ್ತೆಯ (ಸಿಟಿ ಸೆಂಟರ್ ಮಾಲ್ ಹತ್ತಿರ) ಗಣೇಶ್ ಮಹಲ್‌ನಲ್ಲಿ ಭಾನುವಾರ ಶುಭಾರಂಭಗೊಂಡಿತು.
ಉದ್ಘಾಟನೆ ನೆರವೇರಿಸಿ ಆಶೀರ್ವದಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು, ಶುಚಿ- ರುಚಿಯಾದ ಅಡುಗೆ ಮೂಲಕ ಸದಭಿರುಚಿಯ ಜನರ ಪ್ರೀತಿ- ವಿಶ್ವಾಸ ಸಂಪಾದಿಸಿರುವ ಪಾಕಶಾಲಾ ಬಳಗಕ್ಕೆ ಗ್ರಾಹಕರ ಸಂತೃಪ್ತಿಯೇ ಆಶೀರ್ವಾದವಾಗಲಿದೆ ಎಂದು ಹರಸಿದರು.
ಮನುಷ್ಯರು ನಾವು ಬದುಕಬೇಕು ಹಾಗೂ ಜತೆಗೆ ಇತರರನ್ನು ಬದುಕಿಸಲು ಅವಕಾಶ ಮಾಡಿಕೊಡಬೇಕು ಎನ್ನುವುದು ಸರಳ ತತ್ವ. ‘ಪಾಕಶಾಲಾ’ ಮಾಲೀಕರು ಉದ್ಯಮದಲ್ಲಿ ತಾವು ಯಶಸ್ವಿಯಾಗುವುದರ ಜತೆಗೆ ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸುವ ಮೂಲಕ ತುಂಬಾ ದೊಡ್ಡ ಸಂಖ್ಯೆಯ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಇದು ಅವರ ಸಂಸ್ಥೆಯ ಗ್ರಾಹಕ ಸ್ನೇಹಿ ವ್ಯವಸ್ಥೆ, ಬದ್ದತೆಗೆ ದೊರೆತ ಫಲ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಾತನಾಡಿ, ಕರ್ನಾಟಕ ಕರಾವಳಿಯು ಧಾರ್ಮಿಕ ಶ್ರದ್ಧಾ ಕೆಂದ್ರಗಳಿಗೆ ಪ್ರಸಿದ್ಧಿಯಾಗಿರುವಂತೆ, ಇಲ್ಲಿಯ ಹೊಟೇಲ್ ಉದ್ಯಮ ಕೂಡ ಜಗದಗಲ ಖ್ಯಾತಿ ಪಡೆದಿದೆ. ಬೆಳೆಯುತ್ತಿರುವ ಮಂಗಳೂರಿಗೆ ‘ಪಾಕಶಾಲ’ ರೆಸ್ಟೋರೆಂಟ್ ದೊಡ್ಡ ಕೊಡುಗೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಕ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಪಾರ್ಟಿ ಹಾಲ್ ಉದ್ಘಾಟಿಸಿದರು. ಶಾರದಾ ವಿದ್ಯಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ ಪುರಾಣಿಕ್, ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲಕಟ್ಟಡದ ಪಾಲುದಾರ ಎಲ್.ನರಸಿಂಹ ಮೂರ್ತಿ, ಸಂಘಟಕ ಸುಧಾಕರ ರಾವ್ ಪೇಜಾವರ ಮುಖ್ಯ ಅತಿಥಿಗಳಾಗಿದ್ದರು.
ಪಾಕಶಾಲ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ವಾಸುದೇವ ಅಡಿಗ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿಜು ಥೋಮಸ್, ನಿರ್ದೇಶಕಿ ವೈಜಯಂತಿ ಅಡಿಗ ಉಪಸ್ಥಿತರಿದ್ದರು.
* ಪ್ರತ್ಯೇಕ ಹಾಲ್
ಮಂಗಳೂರಿನ ಹೃದಯಭಾಗದಲ್ಲಿ ಪ್ರಾರಂಭಗೊಂಡಿರುವ ‘ಪಾಕಶಾಲ’ ರೆಸ್ಟೋರೆಂಟ್‘ ನಲ್ಲಿ ಜನರಿಗೆ ರುಚಿಯಾದ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿಯಲು ವಿಶಾಲವಾದ ಸ್ಥಳಾವಕಾಶದ ಜೊತೆಗೆ ಫ್ಯಾಮಿಲಿ ಸಮ್ಮೇಳನ, ಇವೆಂಟ್ಸ್ ಮತ್ತು ಶುಭಸಮಾರಂಭಗಳನ್ನು ಆಚರಿಸಲು ವಿಶಾಲವಾದ, ಹವಾನಿಯಂತ್ರಿತ ಡೈನಿಂಗ್ ಹಾಲ್ ಮತ್ತು ಸುಸಜ್ಜಿತ ಪಾರ್ಟಿ ಹಾಲ್‌ನ ಸೌಲಭ್ಯವಿದೆ.
........
ಸಂಸ್ಥೆಯ ಯಶೋಗಾಥೆ
1960ರಲ್ಲಿ ಕೆ.ಎನ್. ವಾಸುದೇವ ಅಡಿಗರ ತಂದೆಯವರಾದ ಕುಂದಾಪುರ- ಶಂಕರನಾರಾಯಣದ ಕೆಎನ್ ನಾಗೇಶ್ವರ ಅಡಿಗ ಮತ್ತು ಕೆ.ಎನ್ ಸರಸ್ವತಿ ಅವರು ಬೆಂಗಳೂರಿನಲ್ಲಿ ಬ್ರಾಹ್ಮಣರ ಕಾಫಿ ಬಾರ್ ಸ್ಥಾಪಿಸಿದರು. ಅವರ ಮಗ, ಕುಂದಾಪುರದ ಕೆ.ಎನ್. ವಾಸುದೇವ ಅಡಿಗರು ಬಿಎಂಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪದವೀಧರರು, 1993ರಲ್ಲಿ ವಾಣಿಜ್ಯೋದ್ಯಮ ದೃಷ್ಟಿಕೋನಕ್ಕಾಗಿ ವಾಸುದೇವ ಅಡಿಗಾಸ್ ಬ್ರಾಂಡ್ ಪ್ರಾರಂಭಿಸಿ ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದಾರೆ.
2018 ರಲ್ಲಿ ವಾಸುದೇವ ಅಡಿಗ ಅವರು ಸಂಪೂರ್ಣವಾಗಿ ಹೊಸ ಮತ್ತು ಸ್ವತಂತ್ರ ಉದ್ಯಮವನ್ನು ಪಾಕಶಾಲಾದ ಮೂಲಕ ಪ್ರಾರಂಭಿಸಿದರು. ಕೇವಲ ಏಳು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶ 30+ ಔಟ್ಲೆಟ್ ಗಳನ್ನು ಪ್ರಾರಂಭಿಸಿದರು. ಪಾಕಶಾಲಾದ ಔಟ್‌ಲೆಟ್‌ಗಳು ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್, ಕಾಂಟಿನೆಂಟಲ್ ಮತ್ತು ಚಾಟ್ಸ್ ನಾದ್ಯಂತ 325 ಕ್ಕೂ ಹೆಚ್ಚು ಸಸ್ಯಾಹಾರಿ ಭಕ್ಷ್ಯಗಳನ್ನು ಒದಗಿಸುತ್ತವೆ.