ಪವನ್ ಜತೆ ನಟಿಸ್ತಾರಾ ಸುದೀಪ್?; ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ ಹೀಗೊಂದು ಸುದ್ದಿ

Pawan_Sudeep
Published on

ಬೆಂಗಳೂರು: ಕನ್ನಡದ ಜತೆಗೆ ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ಗೆ, ಇದೀಗ ಮತ್ತೆ ಟಾಲಿವುಡ್‌ನಿಂದ ಬುಲಾವ್ ಬಂದಿದೆ. ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಅವರ ‘ಸೈರಾ’ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಈ ಸಲ ಅವರ ಸಹೋದರ ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಹೌದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸುದೀಪ್ ಈಗಾಗಲೇ ನಟಿಸಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜತೆಗೆ ದಬಾಂಗ್ 3 ಚಿತ್ರದಲ್ಲಿ ಖಳನಾಗಿಯೂ ಸುದೀಪ್ ಖದರ್ ತೋರಿಸಿದ್ದರು. ಇದೀಗ ಮೊದಲ ಬಾರಿ ಪವನ್ ಕಲ್ಯಾಣ್ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರಂತೆ. ಹಾಗಾದರೆ ಸಿನಿಮಾ ಯಾವುದು? ಇದೇ ವರ್ಷದ ಆರಂಭದಲ್ಲಿ ಪಕ್ಕದ ಮಾಲಿವುಡ್‌ನಲ್ಲಿ ತೆರೆಕಂಡ ‘ಅಯ್ಯಪ್ಪನಮ್ ಕೋಶಿಯಮ್’ ಚಿತ್ರ ತೆರೆಕಂಡಿತ್ತು. ಈಗ ಇದೇ ಚಿತ್ರ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಪವನ್ ಕಲ್ಯಾಣ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ.

ಮೂಲ ಸಿನಿಮಾದಲ್ಲಿ ಪೃಥ್ವಿರಾಜ್ ಮತ್ತು ಬಿಜು ಮೆನನ್ ನಟಿಸಿದ್ದರು. ಆ ಎರಡು ಪಾತ್ರಗಳನ್ನು ತೆಲುಗಿನಲ್ಲಿ ಪವನ್ ಮತ್ತು ಸುದೀಪ್ ನಿಭಾಯಿಸಲಿದ್ದಾರಂತೆ. ಸಾಗರ್ ಕೆ. ಚಂದ್ರ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಚಿತ್ರಕ್ಕೆ ಎಸ್. ನಾಗವಂಸಿ ಬಂಡವಾಳ ಹೂಡುತ್ತಿದ್ದಾರೆ. ಪೃಥ್ವಿರಾಜ್ ಪಾತ್ರವನ್ನು ಸುದೀಪ್ ಮಾಡಿದರೆ ಉತ್ತಮ. ಅವರಿಗೆ ಈ ಪಾತ್ರ ಒಪ್ಪುತ್ತದೆ ಎಂಬುದು ತಂಡದ ಪ್ಲಾನ್ ಆಗಿದ್ದು, ಇನ್ನಷ್ಟೇ ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net