

ಬೆಂಗಳೂರು: ಹಲವು ಕುತೂಹಲಗಳಿಂದಲೇ ಗಮನಸೆಳೆಯುತ್ತಿದೆ ನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಚಾರ್ಲಿ ತಂಡ, ಶುಭ ಶುಕ್ರವಾರ ಸಿನಿಮಾಭಿಮಾನಿಗಳಿಗೆ ಸರ್ಪ್ರೈಸ್ ಉಡುಗೊರೆ ನೀಡಿದೆ. ತಮಿಳಿನ ಖ್ಯಾತ ನಟ ಬಾಬ್ಬಿ ಸಿಂಹ ಚಾರ್ಲಿ ಚಿತ್ರದಲ್ಲಿ ನಟಿಸಿದ್ದು, ಅವರ ಲುಕ್ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಇಂದು (ನ.6) ಬಾಬ್ಬಿ ಸಿಂಹ ಜನ್ಮದಿನ. ಅವರ ಹುಟ್ಟುಹಬ್ಬಕ್ಕೆ ಚಿತ್ರದಲ್ಲಿನ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಮೊದಲ ಬಾರಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಅವರ ಆಗಮನವಾಗುತ್ತಿದೆ. ಚಿತ್ರದ ದ್ವಿತೀಯಾರ್ಧದಲ್ಲಿ ವಂಶಿನಾಧನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಬ್ಬಿ ಸಿಂಹ, ತೆರೆಮೇಲೆ ಕಡಿಮೆ ಸಮಯ ಕಾಣಿಸಿಕೊಂಡರು, ಒಂದಷ್ಟು ತಿರುವು ನೀಡಿ ಹೋಗುತ್ತಾರಂತೆ.
ಬಹುತೇಕ ಚಿತ್ರೀಕರಣವನ್ನೂ ಇಡೀ ತಂಡ ಮುಗಿಸಿಕೊಂಡಿರುವುದರಿಂದ, ಇನ್ನೇನು ಶೀಘ್ರದಲ್ಲಿ ಸಿನಿಮಾ ಬಗ್ಗೆ ಅಪ್ಡೇಟ್ ಮಾಹಿತಿ ನೀಡಲಿದೆ. ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಂಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ 777 ಚಾರ್ಲಿ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಶೇ. 90 ಭಾಗದ ಶೂಟಿಂಗ್ ಮುಗಿದಿದೆ.