

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಕೇಶವ್ ಮಹಾರಾಜ್ ತಾನು ಶೀಘ್ರದಲ್ಲೇ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆಯುತ್ತೇನೆ ಎಂದು ಸಂತಸದಿಂದ ಹೇಳಿಕೊಂಡ ಸುದ್ದಿ ಸದ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಹಲವಾರು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇತ್ತೀಚೆಗೆ ಪವಿತ್ರ ರಾಮ ಮಂದಿರಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ ಕೇಶವ್, "ಈ ಹಿಂದೆಯೇ ಹೋಗಬೇಕಿತ್ತು ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಸಮಯ ಮಾಡಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆದ್ರೆ, ಶೀಘ್ರವೇ ಅಯೋಧ್ಯೆಗೆ ಭೇಟಿ ಕೊಟ್ಟು, ಬಾಲರಾಮನ ದರ್ಶನ ಪಡೆಯಲು ನಾನು ಭಾರೀ ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.
"ನನ್ನ ಕುಟುಂಬವು ಯಾವಾಗಲೂ ಭಾರತಕ್ಕೆ ತೀರ್ಥಯಾತ್ರೆಗೆ ತೆರಳಲು ಬಯಸುತ್ತಾರೆ ಮತ್ತು ಭವಿಷ್ಯದಲ್ಲಿ ಅದಕ್ಕಾಗಿ ಸಮಯವನ್ನು ಮೀಸಲಿಡುವುದಾಗಿ ಪ್ರತಿಜ್ಞೆ ಕೂಡ ಮಾಡಿದ್ದಾರೆ" ಎಂಬ ವಿಷಯವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಟೀಮ್ ಪರವಾಗಿ ಆಡುತ್ತಿರುವ ಮಹಾರಾಜ್, ಮೂಲತಃ ಭಾರತದವರಾಗಿದ್ದು, ರಾಮ ಮತ್ತು ಹನುಮಂತನ ನಿಷ್ಠಾವಂತ ಭಕ್ತರು. ಈ ಹಿಂದೆ ಭಾರತ ಪ್ರವಾಸ ಕೈಗೊಂಡಾಗ ಹಲವಾರು ದೇವಾಲಯಗಳಿಗೆ ಭೇಟಿ ನೀಡಿರುವುದಾಗಿ ಕೂಡ ಹೇಳಿಕೊಂಡಿದ್ದಾರೆ.