ಕೇಶವ ಹೆಗಡೆ ಸಾವಿನ ನಂತರವೂ ಸಾರ್ಥಕತೆ

Kesha-Hegde
Published on

ಶಿರಸಿ: ತಮ್ಮ ಇಡೀ ಜೀವನವನ್ನು ಧರ್ಮ,ಸಂಘಟನೆಗಾಗಿ ಸಮರ್ಪಿಸಿ ಕರ್ಮಯೋಗಿಯಾಗಿದ್ದವರು ಕೇಶವ ಹೆಗಡೆ. ವಿಶ್ವ ಹಿಂದು ಪರಿಷತ್ ದಕ್ಷಿಣ ಕ್ಷೇತ್ರ ಕಾರ್ಯದರ್ಶಿಯಾಗಿದ್ದ ಅವರು, ವಿವಾಹವೂ ಆಗದೇ ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದ ಮಹಾ ಚೇತನ.

ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಅವರ ಸಮರ್ಪಣಾ ಬದುಕಿಗೆ ಮತ್ತೊಂದು ಸಾರ್ಥಕತೆ ಕಲ್ಪಿಸಲಾಗಿದೆ.
ದಿವಂಗತ ಕೇಶವ ಗೋವಿಂದ ಅವರ ಅಂತಿಮ ಸಂಸ್ಕಾರವನ್ನು ಮೃತರ ತವರೂರು ಶಿರಸಿಯಲ್ಲಿ ಗುರುವಾರ ನೆರವೇರಿಸಲಾಯಿತು. ಮೃತರ ಸಹೋದರನ ಪುತ್ರ ಸುದರ್ಶನ ಹೆಗಡೆ ಅಗ್ನಿಸ್ಪರ್ಷ ಮಾಡಿದರು.

ಅವರ ಸ್ವಗೃಹ ಮಣ್ಣಿಮನೆಗೆ ಪಾರ್ಥಿವ ಶರೀರವನ್ನು ಕರೆದೊಯ್ದು, ವಿಧಿಗಳನ್ನು ಮುಗಿಸಿ ನಂತರ ಶಿರಸಿಯ ನೆಮ್ಮದಿ ಸದ್ಗತಿ ಧಾಮಕ್ಕೆ ತಂದು ಸಂಸ್ಕಾರಗಳನ್ನು ನೆರವೇರಿಸಲಾಯಿತು. ಸಂಘ ಪರಿವಾರದ ಸಾವಿರಾರು ಜನರು ಈಗ ಘಟನೆಗೆ ಸಾಕ್ಷಿಯಾದರು.

ಶ್ರದ್ಧಾಂಜಲಿ:

Keshav Hegde cremation at Sirsi

ಸ್ಥಳದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್ ಅಖಿಲ ಭಾರತೀಯ ಸಂಘಟನಾ ಮಹಾಮಂತ್ರಿ ವಿನಾಯಕರಾವ್ ದೇಶಪಾಂಡೆ ಅವರು, ಕೇಶವ ಹೆಗಡೆ ವಿನಮ್ರ ಸ್ವಭಾವ, ಸಮರ್ಪಿತಕರ್ಮಯೋಗಿಯಾಗಿದ್ದರು. ಅವರ ಆದರ್ಶ ಪರಿಪಾಲನೆ ಮಾಡಬೇಕು ಎಂದರು.

ಪರಿಷತ್‌ನ ಕೇಂದ್ರೀಯ ಸಹ ಕಾರ್ಯದರ್ಶಿ ತಮಿಳುನಾಡಿನ ಸ್ತಾನ ಮಲೈನ್, ಕೆ.ಜಿ.ಹೆಗಡೆ ಅಜಾತ ಶತ್ರುವಾಗಿದ್ದರು. ಅವರ ಅಗಲಿಕೆ ಕೇವಲ ಸಂಘ ಪರಿವಾರಕ್ಕೆ ಮಾತ್ರವಲ್ಲ ಹಿಂದು ಸಮಾಜಕ್ಕೇ ದೊಡ್ಡ ನಷ್ಟ ಎಂದರು.

ಇದನ್ನೋ ಓದಿ: ಕುಮಟಾದಲ್ಲಿ ಸದ್ಯಕ್ಕಿಲ್ಲ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ-ದಿನಕರ ಶೆಟ್ಟಿ ಪ್ರಶ್ನೆಗೆ ಸದನದಲ್ಲಿ ಸಚಿವ ಶರಣಪ್ರಕಾಶ ಪಾಟೀಲ್‌ ಉತ್ತರ
ಆರ್‌ಎಸ್‌ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಮಂಗೇಶ ಭೇಂಡೆ, ರಾಮ ಜನ್ಮ ಭೂಮಿ ಹೋರಾಟ ಸಂದರ್ಭದಲ್ಲಿ ತೊಡಗಿಸಿಕೊಂಡವರು ಕೇಶವ ಹೆಗಡೆ, ಎಂಥ ವೇಳೆಯಲ್ಲೂ ವಿಚಲಿತರಾಗದೇ, ಸಮಚಿತ್ತ ದೃಷ್ಟಿಯಲ್ಲಿ ಕೆಲಸ ಮಾಡಿ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ನೆನಪಿಸಿಕೊಂಡರು.

ದಕ್ಷಿಣ ಪ್ರಾಂತ ಅಧ್ಯಕ್ಷ ಎಂ.ಬಿ. ಪುರಾಣಿಕ, ಕೊನೆಯ ನಿಮಿಷದ ತನಕ ಕರ್ತವ್ಯ ನಿರ್ವಹಿಸಿದ ಕೇಶವ ಹೆಗಡೆ ಅವರು ಕಾರ್ಯಕರ್ತರಿಗೆಲ್ಲ ಮಾದರಿ ಎಂದರು.
ವಿಎಚ್‌ಪಿಯ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ವಿಭಾಗ ಬೌದ್ದಿಕ ಪ್ರಮುಖ ಮಧು ಕಿರಗಾರ,ಆರ್‌ಎಸ್‌ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಭಜರಂಗ ದಳದ ಸೂರ್ಯನಾರಾಯಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು ಇತರರು ಇದ್ದರು.
ಸ್ವರ್ಣವಲ್ಲೀ ಶ್ರೀ ಸಂತಾಪ
ಕೇಶವ ಹೆಗಡೆ ಅವರ ನಿಧನಕ್ಕೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. ಅವರು ನಮಗೆ ತುಂಬಾ ಆತ್ಮೀಯರಾಗಿದ್ದರು. ನಮಗೆ ವಿಶ್ವ ಹಿಂದೂ ಪರಿಷತ್ ಹಾಗೂ ಸಂಘ ಪರಿವಾರದಲ್ಲಿಯೂ ಎತ್ತರದ ಮಟ್ಟದ ಪ್ರಮುಖರ ಸಂಪರ್ಕ ಆಗಲು ಕೇಶವ ಹೆಗಡೆ ಪ್ರಮುಖ ಕಾರಣೀಕರ್ತರಾಗಿದ್ದರು. ಸಮರ್ಪಣಾ ಭಾವದ ಕೆಲಸಗಾರ ಅವರು. ಅವರು ಸದ್ಗತಿ ಹೊಂದಲಿ. ಅವರ ಸಮರ್ಪಣಾ ಭಾವ ಈಗಿರುವ ನಮಗೆಲ್ಲ ಪ್ರೇರಣೆ ಆಗಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net