More

    ಕುಮಟಾದಲ್ಲಿ ಸದ್ಯಕ್ಕಿಲ್ಲ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ-ದಿನಕರ ಶೆಟ್ಟಿ ಪ್ರಶ್ನೆಗೆ ಸದನದಲ್ಲಿ ಸಚಿವ ಶರಣಪ್ರಕಾಶ ಪಾಟೀಲ್‌ ಉತ್ತರ

    ಕಾರವಾರ:ಉತ್ತರ ಕನ್ನಡದ ಜಿಲ್ಲೆಯ ಜನರ ಬಹುದಿನಗಳ ಹಕ್ಕೊತ್ತಾಯವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದ್ಯಕ್ಕಂತೂ ನಿರ್ಮಾಣವಾಗುವ ಲಕ್ಷಣವಿಲ್ಲ.
    ಕುಮಟಾದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಆಸ್ಪತ್ರೆ ನಿರ್ಮಾಣ ಸದ್ಯಕ್ಕಿಲ್ಲ ಎಂದು ವಿಧಾನಸಭೆ ಅಧಿವೇಶನದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.
    ಕುಮಟಾ ಶಾಸಕ ದಿನಕರ ಶೆಟ್ಟಿ ಅವರು ಸದನದಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ನಿರ್ಮಿಸುವ ಯೋಜನೆ ಜಾರಿಗೆ ತರಲಾಗಿತ್ತು. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗಿದೆ.
    ಇನ್ನು ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಇದ್ದರೂ ಅದಕ್ಕೆ ಯಾವುದೇ ಬಜೆಟ್ ಮಂಜೂರಾತಿ ಇಲ್ಲ. ಇನ್ನು ಜಾಗವೂ ಸಂಪೂರ್ಣವಾಗಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರವಾಗಿಲ್ಲ.

    ಮುಂದೆ ಜಾಗ ಹಸ್ತಾಂತರವಾದ ನಂತರ ಅನುದಾನ ಲಭ್ಯತೆಯನ್ನು ನೋಡಿಕೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಪರಿಶೀಲಿಸಲಾಗುವುದು ಎಂದರು.

    ಪಟ್ಟು ಹಿಡಿದ ಶಾಸಕ:

    ಕುಮಟಾ ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿದೆ. ಅಂಕೋಲಾ, ಶಿರಸಿ, ಸಿದ್ದಾಪುರ, ಹೊನ್ನಾವರ ಹೀಗೆ ಅಕ್ಕಪಕ್ಕದ ತಾಲೂಕುಗಳಿಗೂ ಅನುಕೂಲವಾಗುತ್ತದೆ.

    ಈ ಭಾಗದಲ್ಲಿ ಯಾವುದೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಅಪಘಾತ ಸಂಭವಿಸಿದರೆ ದೂರದ ಮಣಿಪಾಲ ಅಥವಾ ಮಂಗಳೂರಿಗೆ ತೆರಳಬೇಕು. ಕಾರವಾರದಲ್ಲಿ ಮೆಡಿಕಲ್ ಕಾಲೇಜ್ ಆಗಿದ್ದರೂ ಅಲ್ಲಿ ಎಲ್ಲ ಆಧುನಿಕ ವ್ಯವಸ್ಥೆ ಇಲ್ಲ.

    ಕುಮಟಾದಿಂದ ಕಾರವಾರಕ್ಕೆ 70 ಕಿಮೀ ದೂರವಾಗುತ್ತದೆ. ಕಾರವಾರ ಗೋವಾ ಗಡಿಯಲ್ಲಿದೆ. ಇದರಿಂದ ಇಡೀ ಜಿಲ್ಲೆಗೆ ಅನುಕೂಲವಾಗುವುದಿಲ್ಲ.
    ಜಿಲ್ಲೆಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹೋರಾಟ ಮಾಡಿದ್ದಾರೆ.

    ಇದನ್ನೂ ಓದಿ:ಅತಿಥಿ ಶಿಕ್ಷಕರ ವೇತನ ಹೆಚ್ಚಿಸುವ ಬಗ್ಗೆ ಪರಿಶೀಲನೆ

    ಇದರಿಂದ ಹಿಂದಿನ ಸರ್ಕಾರವಿದ್ದಾಗ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಕಂದಾಯ ಇಲಾಖೆಯ ಜಮೀನನ್ನು ಹಸ್ತಾಂತರಿಸಲಾಗಿದೆ.

    ಕೃಷಿ ಇಲಾಖೆಯ 15 ಎಕರೆ ಜಮೀನನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗುವುದು. ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ.

    ಕುಮಟಾದಲ್ಲಿ ಆಸ್ಪತ್ರೆ ಅತಿ ಅಗತ್ಯವಿದೆ. ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯಕೀಯ ಶಿಕ್ಷಣ ಸಚಿವರು ಮನಸ್ಸು ಮಾಡಬೇಕು ಎಂದು ಪರಿ,ಪರಿಯಾಗಿ ವಿನಂತಿಸಿದರು.

    ಸರ್ಕಾರದ ನೀತಿಯೇ ಹಾಗಿದೆ

    ಕಾರವಾರಕ್ಕೆ ಮೆಡಿಕಲ್ ಕಾಲೇಜ್ ನೀಡಲಾಗಿದೆ. ಅದನ್ನು ಅಭಿವೃದ್ಧಿ ಮಾಡುವ ಬಗ್ಗೆ ನೀವು ಮಾತನಾಡಿ. ಒಂದು ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜ್ ಎಂದು ಸರ್ಕಾರದ ನೀತಿ ಇರುವಾಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೂ ವೈದ್ಯಕೀಯ ಶಿಕ್ಷಣ ಸಚಿವರು ಪರಿಶೀಲಿಸುತ್ತಿರುವುದಾಗಿ ಭರವಸೆ ನೀಡಿದ್ದಾರೆ. ನೀವು ಕುಳಿತುಕೊಳ್ಳಿ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ದಿನಕರ ಶೆಟ್ಟಿ ಅವರ ಮನವಿಯನ್ನು ತಳ್ಳಿ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts