ಕುಮಟಾ: ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಇಬ್ಬರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಸ್ಥಳೀಯ ಈಶ್ವರ ಬೀರಪ್ಪ ನಾಯ್ಕ ಹಾಗೂ ಮಹಾಬಲೇಶ್ವರ ಬೀರಪ್ಪ ನಾಯ್ಕ ಚಿರತೆಯಿಂದ ಗಾಯಗೊಂಡವರು. ಈಶ್ವರ ನಾಯ್ಕ ಕೈಬೆರಳಿಗೆ ಚಿರತೆ ಕಚ್ಚಿದ್ದರೆ, ಮಹಾಬಲೇಶ್ವರ ನಾಯ್ಕ ಭುಜಕ್ಕೆ ಕಚ್ಚಿ ಗಂಭೀರ ಗಾಯಗಳಾಗಿದ್ದು ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಚಿರತೆ ಆಸುಪಾಸಿನ ಹಲವು ಮನೆಯೊಳಗೆ ಹೊಕ್ಕು ಓಡಾಡಿದ್ದು, ಜನ ಕಂಗಾಲಾಗಿದ್ದಾರೆ.
ಚಿರತೆ ಜತೆ ವಾಸ
ಸದ್ಯ ಚಿರತೆಯು ಸೀತು ಲಕ್ಷ್ಮಣ ನಾಯ್ಕ ಅವರ ಮನೆಯಲ್ಲಿ ಅವಿತುಕೊಂಡಿದೆ. ಜನ ಹೊರಗಿನಿಂದ ಮನೆಯ ಬಾಗಿಲು ಹಾಕಿದ್ದಾರೆ. ಆದರೆ, ಭಯದ ಸಂಗತಿ ಎಂದರೆ ಚಿರತೆ ಇರುವ ಮನೆಯ ಇನ್ನೆರಡು ಕೋಣೆಗಳಲ್ಲೇ ನಾಳ್ವರು ಇದ್ದು. ಎರಡು ತಾಸಿನಿಂದ ಬಾಗಿಲು ಹಾಕಿಕೊಂಡು ಜೀವ ಕೈಯ್ಯಲ್ಲಿ ಹಿಡಿದು ಕುಳಿತಿದ್ದಾರೆ. ಹಿಡಿಯಲು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.