

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ತಾಲೂಕು, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕುಮಟ್ಟದ ಕೆಸರ್ ಕಂಡೊಡು ಗೌಡರೆ ಗೌಜಿ ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಆ.18ರಂದು ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆ(ಎ.ಪಿ.ಎಂ.ಸಿ ಸಮೀಪ)ಯಲ್ಲಿ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಎಚ್.ಪದ್ಮಗೌಡ ಬೆಳಾಲು ತಿಳಿಸಿದರು.
ವಾಣಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಪುನರ್ ಸಂಘಟನೆ ಮತ್ತು ಸಮಾಜ ಬಂಧುಗಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಬಾರಿ ಕೆಸರು ಕಂಡೊಡು ಗೌಡರೆ ಗೌಜಿ ಗಮ್ಮತ್ ಎಂಬ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ನಡೆಯುವ ಕಾರ್ಯಕ್ರಮವನ್ನು ಗೌಡರ ಯಾನೆ ಒಕ್ಕಲಿಗರ ಸಂಘದ ಮಾತೃಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ ಉದ್ಘಾಟಿಸಲಿದ್ದು, ಗೌಡರ ಯಾನೆ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪ್ ಸಿಂಹ ನಾಯಕ್, ಭೋಜೇಗೌಡ, ತಾಲೂಕು ಸಂಘದ ಗೌರವಾಧ್ಯಕ್ಷ ಎಚ್.ಪದ್ಮಗೌಡ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ, ಕಾರ್ಯದರ್ಶಿ ಗಣೇಶ್ ಗೌಡ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಗೌಡರ ಯಾನೆ ಒಕ್ಕಲಿಗರ ಸಂಘದ ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ನಿಡ್ಪಾಜೆ ಅಧ್ಯಕ್ಷತೆ ವಹಿಸಲಿದ್ದು, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಗೌಡ ಮರಕಡ, ಹೈಕೋರ್ಟ್ ವಕೀಲ ಕರುಣಾಕರ ಗೌಡ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಜತೆ ಕಾರ್ಯದರ್ಶಿ ಕೆ.ಎಂ.ಶ್ರೀನಾಥ್, ಮಹಿಳಾ ವೇದಿಕೆಯ ಜತೆ ಕಾರ್ಯದರ್ಶಿ ಮೀನಾಕ್ಷಿ ಎನ್, ಸಂಘದ ಕಾರ್ಯದರ್ಶಿ ಗಣೇಶ್ ಗೌಡ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ಗೌಡ ನಿಡ್ಡಾಜೆ ಉಪಸ್ಥಿತರಿದ್ದರು.
ಬಾಲಕ-ಬಾಲಕಿಯರಿಗೆ ರಿಲೇ ಸ್ಪರ್ಧೆ, ನೂತನ ದಂಪತಿಗಳಿಗೆ ಉಪ್ಪು ಮುಡಿ ಓಟ, 50 ವರ್ಷ ಮೇಲ್ಪಟ್ಟ ಪುರುಷರಿಗೆ ಲಿಂಬೆ ಚಮಚ ಓಟ, ಮಹಿಳೆಯರಿಗೆ ಸೊಂಟದಲ್ಲಿ ಕೊಡಪಾನ ಇಟ್ಟು ನೀರು ತರುವುದು, 35-45 ವರ್ಷದ ದಂಪತಿಗಳಿಗೆ ಅಡಕೆ ಹಾಳೆ ಎಳೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ, ಮಹಿಳೆಯರಿಗೆ ಥ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ ಎಂದು ಎಚ್.ಪದ್ಮಗೌಡ ಬೆಳಾಲು ತಿಳಿಸಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜದ ಸದಸ್ಯರನ್ನು ಸನ್ಮಾನಿಸಲಾಗುವುದು. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಭೋಜೆ ಗೌಡ ಹಾಗೂ ಯೋಗಾಸನದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ಸಾಧಕರಾದ ಕುಶಾಲಪ್ಪ ಗೌಡ ನೆಕ್ಕರಾಜೆ ಅವರನ್ನು ಗೌರವಿಸಲಾಗುವುದು. ವಿವಿಧ ಗ್ರಾಮ ಸಮಿತಿಗಳ ವತಿಯಿಂದ ಜಾನಪದ ಸಂಸ್ಕೃತಿ ಬಿಂಬಿಸುವ ಪಥ ಸಂಚಲನ, ವಾಣಿ ಶಿಕ್ಷಣ ಸಂಸ್ಥೆಗಳ ಮೈದಾನದಿಂದ ಕ್ರೀಡಾಕೂಟ ನಡೆಯುವ ಗದ್ದೆಯವರೆಗೆ ಸಾಗಿಬರಲಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಸಮುದಾಯದ ಜನರ ಸಂಘಟನೆ ಹಾಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ 1983ರಲ್ಲಿ ಸಂಘ ಅಸ್ತಿತ್ವಕ್ಕೆ ಬಂದಿದೆ. ತಾಲೂಕು ಸಂಘದ ಸತತ ಪ್ರಯತ್ನದ ಫಲವಾಗಿ 1990ರಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯರಂಭವಾಯಿತು. ಇಂದು ವಾಣಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸೇವೆ ಸಲ್ಲಿಸುತ್ತಿವೆ. 2004ರಲ್ಲಿ ಪ್ರಾರಂಭವಾದ ವಾಣಿ ಪದವಿಪೂರ್ವ ಕಾಲೇಜು ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ. 2019ರಲ್ಲಿ ಪ್ರಾರಂಭವಾದ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮೂಲಕ ಆರ್ಥಿಕ ರಂಗಕ್ಕೆ ಪದಾರ್ಪಣೆ ಮಾಡಲಾಯಿತು. 2020ರಿಂದ ಸ್ಪಂದನಾ ಸೇವಾ ಸಂಘದ ಮೂಲಕ ಸಮಾಜದ ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರಿಗೆ, ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಕಾರ ನೀಡುವ ಕೈಂಕರ್ಯ ನಡೆಯುತ್ತಿದೆ.