

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ವಯನಾಡಿನ ಚೂರನ್ಮಲೆ ದುರಂತ ಭೂಮಿಯಲ್ಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಿರುವ ಬೆರಳೆಣಿಕೆಯ ಜನರ ಮಧ್ಯೆ ಸಾಕು ನಾಯಿಯೊಂದಕ್ಕೆ ಪರಿಹಾರ ಕಾರ್ಯಾಚರಣೆಗೆ ತೆರಳಿದ್ದ ಕಾಸರಗೋಡು ನಿವಾಸಿಗಳು ಆಶ್ರಯದಾತರಾಗಿದ್ದಾರೆ.
ದುರಂತ ಭೂಮಿಯಿಂದ ಈ ನಾಯಿಯನ್ನು ಕಾಸರಗೋಡಿಗೆ ತಲುಪಿಸಿರುವ ತಂಡ, ಇದನ್ನು ಸಾಕುವ ಹೊಣೆ ತನ್ನ ತಂಡದ ಸದಸ್ಯರೊಬ್ಬರಿಗೆ ನೀಡಿದೆ. ನಾಯಿಗೆ ವೀರನ್ ಎಂದು ಹೆಸರನ್ನಿರಿಸಲಾಗಿದ್ದು, ಸ್ನೇಹದಿಂದ ಇದನ್ನು ವೀರು ಎಂದು ಕರೆಯುತ್ತಾರೆ. ವಯನಾಡಿನ ದುರಂತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಗೆ ಕಾಸರಗೋಡಿನ ಎಐವೈಎಫ್ನ ಭಗತ್ಸಿಂಗ್ ಯೂತ್ ಫೋರ್ಸ್ ಕಾರ್ಯಕರ್ತರು ತೆರಳಿ ಅಲ್ಲಿ ಕೆಲವೊಂದು ಸಾಕುನಾಯಿಗಳಿಗೆ ಆಹಾರ ನೀಡಿದ್ದರು. ಉಳಿದ ನಾಯಿಗಳು ಆಹಾರ ಸೇವಿಸಿ ತಮ್ಮ ಪಾಡಿಗೆ ತೆರಳಿದ್ದರೆ, ವೀರೂ ಮಾತ್ರ ಕದಲದೆ ಇವರೊಂದಿಗೇ ಹೆಜ್ಜೆ ಹಾಕುತ್ತಿತ್ತು. ಕಾರ್ಯಾಚರಣೆ ಮುಗಿಸಿ ತಮ್ಮ ವಾಹನದಲ್ಲಿ ಊರಿಗೆ ಹೊರಡುತ್ತಿದ್ದಂತೆ ವೀರೂ ಕೂಡಾ ವಾಹನ ಹಿಂಬಾಲಿಸಿ ಬಂದಿದೆ. ಶ್ವಾನವನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡ ತಂಡ ಸನಿಹದ ಪೇಟೆಯಲ್ಲಿ ಇಳಿಸಿ ತಂಡ ಮುಂದೆ ಸಾಗಲು ಯತ್ನಿಸಿದರೂ, ನಾಯಿ ಮಾತ್ರ ವಾಹನವನ್ನು ಹಿಂಬಾಲಿಸಿಕೊಂಡು ಬರಲಾರಂಭಿಸಿತ್ತು. ನಂತರ ನಾಯಿಯನ್ನು ವಾಹನಕ್ಕೆ ಹತ್ತಿಸಿಕೊಂಡು ಕಾಸರಗೋಡಿಗೆ ತಂದಿದ್ದಾರೆ. ತಂಡದ ಸದಸ್ಯ ವಿಪಿನ್ ಶ್ವಾನವನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.