ಕತ್ತರಿಸಿದ ಕೂದಲನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಿ; ಆಶಾ ಕಾರ್ಯಕರ್ತೆಯರ ವಿರುದ್ಧ ಸಚಿವ ಕಿಡಿ | ASHA

ವಿಜಯವಾಣಿ - 2025-03-31T202243.997
Published on

ASHA Workers: ಕಳೆದ ತಿಂಗಳು ರಸ್ತೆಗಿಳಿದು ದೊಡ್ಡ ಮಟ್ಟದಲ್ಲಿ ಮುಷ್ಕರ ಕೈಗೊಂಡ ಕೇರಳ ಆಶಾ ಕಾರ್ಯಕರ್ತೆಯರು, ರಾಜ್ಯ ಸರ್ಕಾರ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ತಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಈ ಹಿಂದೆ ಪ್ರತಿಭಟನಾನಿರತ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿದ್ದ ಕಾರ್ಮಿಕ ಸಂಘದ ನಾಯಕಿಯೊಬ್ಬರು, ಕೆಲಸಕ್ಕೆ ಮರಳದೆ ಮುಷ್ಕರ ಮುಂದುವರಿಸಿದರೆ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಕೆ ರವಾನಿಸಿದ್ದರು. ಇದ್ಯಾವುದಕ್ಕೂ ಕಿಂಚಿತ್ತು ತಲೆಕೆಡಿಸಿಕೊಳ್ಳದ 'ಆಶಾ' ಮಹಿಳೆಯರು, ಇದೀಗ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು 50ನೇ ದಿನಕ್ಕೆ ಕೊಂಡೊಯ್ದಿದ್ದಾರೆ.

ಇಂದು (ಮಾ.31) ಬೆಳಗ್ಗೆಯಿಂದಲೇ ಕೇರಳ ಸಚಿವಾಲಯದ ಮುಂದೆ ತಮ್ಮ ವಿವಿಧ ಬೇಡಿಕೆಗಳಿಗಾಗಿ ಬೃಹತ್​ ಪ್ರತಿಭಟನೆ ಕೈಗೊಂಡ ಆಶಾ ಕಾರ್ಯಕರ್ತೆಯರು, 50ನೇ ದಿನದ ಹೋರಾಟದಂದೇ ತಮ್ಮ ಕೇಶಕ್ಕೆ ಕತ್ತರಿ ಹಾಕಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನೂರಾರು ಮಹಿಳೆಯರು ಒಟ್ಟುಗೂಡಿ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಹಲವರು ತಮ್ಮ ಕೂದಲನ್ನು ಕತ್ತರಿಸಿ, ಸರ್ಕಾರಕ್ಕೆ ಹಿಡಿಶಾಪ ಹಾಕುತ ಕಣ್ಣೀರಿಟ್ಟರು.

ತಲೆ ಕೂದಲನ್ನು ಕೇಂದ್ರಕ್ಕೆ ರವಾನಿಸಿ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿರುದ್ಧ ಕಿಡಿಕಾರಿದ ಕೇರಳದ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ, "ಆಶಾ ಕಾರ್ಯಕರ್ತೆಯರು ತಾವು ಕತ್ತರಿಸಿಕೊಂಡ ತಲೆ ಕೂದಲುಗಳನ್ನು ರಾಜ್ಯದ ಕೇಂದ್ರ ಸಚಿವರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು (ಆಶಾಗಳು) ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಮುಂದೆ ತಮ್ಮ ಪ್ರತಿಭಟನೆ ಹಾಗೂ ಕೂದಲು ಕತ್ತರಿಸುವ ಪ್ರದರ್ಶನವನ್ನು ಹಮ್ಮಿಕೊಳ್ಳಬೇಕಿತ್ತು" ಎಂದು ವ್ಯಂಗ್ಯವಾಡಿದ್ದಾರೆ. ಸಚಿವರ ಮಾತಿಗೆ ಕಿಡಿ ಹೆಚ್ಚಾಗಿದ್ದು, ಹಲವರು ಶಿವನ್​ಕುಟ್ಟಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಾರ್ಯಕರ್ತೆಯರ ಅಳಲು

“ನಮಗೆ ಕೂದಲು ನಮ್ಮ ಮಕ್ಕಳಂತೆ. ಈಗಾಗಲೇ ಸಲ್ಲಿಸಿರುವ ವಿವಿಧ ಬೇಡಿಕೆಗಳ ಬಗ್ಗೆ ಕಿಂಚಿತ್ತು ಸ್ಪಂದಿಸದೆ ಸುಮ್ಮನೆ ಕುಳಿತಿರುವ ರಾಜ್ಯ ಸರ್ಕಾರದ ನಿಲುವೇನು ಎಂಬುದು ನಮಗೆ ತಿಳಿಯುತ್ತಿಲ್ಲ. ನಮ್ಮ ವಿಷಯದಲ್ಲಿ ಕೇರಳ ಸರ್ಕಾರ ಸಂಪೂರ್ಣವಾಗಿ ಮೌನ ತಾಳಿದೆ. ಅವರು ಮೌನಕ್ಕೆ ಜಾರಿದ್ದಾರೆ ಎಂದು ನಾವು ಸುಮ್ಮನಿರುವುದಿಲ್ಲ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಹೋರಾಟಕ್ಕೆ ಕೊನೆಯೇ ಇಲ್ಲ” ಎಂದು ಕಾರ್ಯಕರ್ತೆ ಬಿಂದು ಎಚ್ಚರಿಕೆ ರವಾನಿಸಿದ್ದಾರೆ,(ಏಜೆನ್ಸೀಸ್).Sivankutty

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net