

ಕೇರಳ: ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲ ಸನ್ನಿವೇಶಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಶಸ್ತ್ರಚಿಕಿತ್ಸೆ ಕರ್ತವ್ಯದ ವೇಳೆ ಹಿಜಾಬ್ ನಿಯಮಗಳನ್ನು ಪಾಲಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ನಮಗೆ ಪರ್ಯಾಯ ಆಯ್ಕೆ ಕೊಡಬೇಕು ಎಂದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜ್‌ನ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ ಮುಚ್ಚಿಕೊಳ್ಳುವುದು ಕಡ್ಡಾಯ. ಆಸ್ಪತ್ರೆ ನಿಯಮಗಳ ಪ್ರಕಾರ ಆಪರೇಷನ್ ಥಿಯೇಟರ್ನಲ್ಲಿ ಸೂಚನೆಗಳನ್ನು ಅನುಸರಿಸಿ, ಹಿಜಾಬ್ ಧರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಹೀಗಾಗಿ ಉದ್ದನೆಯ ತೋಳಿನ ಸ್ಕ್ರಬ್ ಜಾಕೆಟ್ ಹಾಗೂ ಸರ್ಜಿಕಲ್ ಹುಡ್ ಧರಿಸಲು ಅವಕಾಶ ಮಾಡಿಕೊಡಬೇಕು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ. 2020ನೇ ಬ್ಯಾಚ್‌ನ ಮೆಡಿಕಲ್ ವಿದ್ಯಾರ್ಥಿನಿ ಪತ್ರ ಬರೆದಿದ್ದು, ಇದಕ್ಕೆ 2018, 2021, 2022ನೇ ಬ್ಯಾಚ್‌ನ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಸಹಿ ಹಾಕಿದ್ದಾರೆ.
ಆಪರೇಷನ್ ಥಿಯೇಟರ್‌ಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತದೆ. ಅಲ್ಲಿ ರೋಗಿಗಳ ಸುರಕ್ಷತೆಯೇ ಮುಖ್ಯ. ಹೀಗಿರುವಾಗ ವಿದ್ಯಾರ್ಥಿನಿಯರ ಬೇಡಿಕೆಯನ್ನು ಸದ್ಯಕ್ಕೆ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚಿಸಲು ಸಮಿತಿ ರಚಿಸಲಾಗಿದ್ದು, ಮುಂದಿನ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಕಾಲೇಜಿನ ಪ್ರಾಶುಂಪಾಲೆ ಡಾ.ಲಿನೆಟ್ ಮೋರಿಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)