ಕೃಷಿ ಕಾನೂನು ವಿಚಾರ: ಡಿ.31ಕ್ಕೆ ವಿಶೇಷ ಅಧಿವೇಶನಕ್ಕೆ ರಾಜ್ಯಪಾಲರ ಅನುಮತಿ ಕೋರಿದ ಕೇರಳ ಸರ್ಕಾರ

Pinarayi Vijayan
Published on

ತಿರುವನಂತಪುರ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪರಿಷ್ಕೃತ ಕೃಷಿ ಕಾನೂನು ವಿಚಾರವಾಗಿ ಚರ್ಚಿಸುವುದಕ್ಕೆ ಡಿಸೆಂಬರ್ 31ಕ್ಕೆ ವಿಶೇಷ ಅಧಿವೇಶನ ನಡೆಸುವುದಕ್ಕೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಕೇರಳ ಸರ್ಕಾರ ಮತ್ತೊಂದು ಸುತ್ತಿನ ಮನವಿ ಸಲ್ಲಿಸಿದೆ. ವಿಶೇಷ ಅಧಿವೇಶನ ನಡೆಸುವ ತೀರ್ಮಾನವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸಚಿವ ಸಂಪುಟ ಸಭೆ ಇಂದು ತೆಗೆದುಕೊಂಡಿದೆ.

ನಿನ್ನೆ ವಿಶೇಷ ಅಧಿವೇಶನ ನಡೆಸುವುದಕ್ಕೆ ಕೇರಳ ಸರ್ಕಾರ ಈ ಹಿಂದೆ ಮಾಡಿದ್ದ ಮನವಿಯನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್​ ತಿರಸ್ಕರಿಸಿದ್ದರು. ರಾಜ್ಯಪಾಲರ ಈ ನಡವಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು. ಪರ ಮತ್ತು ವಿರೋಧದ ಅಭಿಪ್ರಾಯಗಳಿಗೂ ಕಾರಣವಾಗಿತ್ತು. ಕೇರಳದಲ್ಲಿ ಎಡರಂಗ ಸರ್ಕಾರ ಇದ್ದು, ರಾಜ್ಯಪಾಲರ ನಡೆಗೆ ರಾಜಕೀಯ ಬಣ್ಣವನ್ನೂ ಲೇಪಿಸಲಾಗಿತ್ತು.

ಈ ನಡುವೆ, ಇಂದು ಸಚಿವ ಸಂಪುಟ ಸಭೆಯ ನಂತರದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್​, ಬಹುಮತ ಹೊಂದಿರುವ ಸರ್ಕಾರ ತೀರ್ಮಾನವನ್ನು ರಾಜ್ಯಪಾಲರು ಸಾಮಾನ್ಯವಾಗಿ ಒಪ್ಪಿಕೊಂಡು ಬಿಡುತ್ತಾರೆ. ಹಾಗೆಯೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ವಿಶೇಷ ಅಧಿವೇಶನ ನಡೆಸುವುದಕ್ಕೆ ರಾಜ್ಯಪಾಲರು ಅನುಮತಿ ಕೊಡುವರೆಂದು ಆಶಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net