ಕೇರಳಕ್ಕೆ ಕಾಫಿ ವರ, ಗಡಿ ಶಾಲೆಗೆ ಬರ!; ಗುಂಡ್ಲುಪೇಟೆಯಲ್ಲಿ ಹೆಚ್ಚಿದ ಗುಳೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ

xcvdfsdfsfasf
Published on

|ಕೆ.ಎನ್.ಮಹದೇವಸ್ವಾಮಿ ಕೊಡಸೋಗೆ ಗುಂಡ್ಲುಪೇಟೆ

ಕೇರಳದಲ್ಲಿ ಕಾಫಿ ಕೊಯ್ಲಿನ ಸುಗ್ಗಿಕಾಲ ಶುರುವಾಗುತ್ತಿ ದ್ದಂತೆಯೇ ಇತ್ತ ಗುಂಡ್ಲುಪೇಟೆಯ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಬರ ತಟ್ಟಲಾರಂಭಿಸಿದೆ. ತಾಲೂಕಿನ ಕಾರ್ವಿುಕರು ಹೊಟ್ಟೆಪಾಡಿಗಾಗಿ ಕೇರಳಕ್ಕೆ ಕುಟುಂಬ ಸಮೇತ ಗುಳೆ ಹೊರಟಿರುವ ಪರಿಣಾಮ ನೂರಾರು ಮಕ್ಕಳ ಶಿಕ್ಷಣ ಮೊಟಕುಗೊಂಡಿದೆ.

ತಾಲೂಕಿನ ಕಗ್ಗಳ, ಕೆಲಸೂರು, ಚಿಕ್ಕತುಪ್ಪೂರು, ಮಂಗಲ, ಹಂಗಳ, ಬೊಮ್ಮಲಾಪುರ, ಸೋಮನಪುರ, ಕೂತನೂರು, ಮಲ್ಲಯ್ಯನಪುರ, ಕಣ್ಣೇಗಾಲ, ಬೇರಂಬಾಡಿ, ಭೀಮನಬೀಡು, ಅಣ್ಣೂರು, ಕೋಡಹಳ್ಳಿ, ಬನ್ನಿತಾಳಪುರದ ಕಾರ್ವಿುಕರು ಕೇರಳಕ್ಕೆ ಉದ್ಯೋಗ ಅರಸಿ ಗುಳೆ ಹೊರಟಿದ್ದಾರೆ. ಕೇರಳದ ವೈನಾಡು ಜಿಲ್ಲೆಯ ಕಲ್ಪೇಟ್ಟಾ, ಸುಲ್ತಾನ್ ಭತ್ತೇರಿ, ಕೋಯಿಕ್ಕೋಡ್, ಎಡಕ್ಕರ, ನೆಲಂಬೂರು ಮುಂತಾದ ಎಸ್ಟೇಟ್​ಗಳಿಗೆ ಕಾರ್ವಿುಕರನ್ನು ಪೂರೈಸುವ ಏಜೆಂಟರ ಜಾಲ ಸಕ್ರಿಯವಾಗಿದೆ. ದೊಡ್ಡವರು ಕಾಫಿ ಹಣ್ಣು ಬಿಡಿಸಿದರೆ, ಮಕ್ಕಳು ಕಾಫಿ ಕಾಳುಗಳನ್ನು ಸಂಗ್ರಹಿಸಿ ಚೀಲಕ್ಕೆ ತುಂಬುವ ಕೆಲಸ ಮಾಡುತ್ತಾರೆ.

ಕೇರಳಕ್ಕೆ ವಲಸೆ ಹೋಗುವವರ ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಮನವರಿಕೆ ಮಾಡಲಾಗಿದೆ. ಕೆಲವು ಕಾರ್ವಿುಕರು ಮಕ್ಕಳನ್ನು ಸಂಬಂಧಿಕರ ಮನೆಗಳಲ್ಲಿ ಬಿಟ್ಟಿದ್ದರೆ, ಇನ್ನೂ ಕೆಲವರು ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಕೇರಳಕ್ಕೆ ಹೋಗಿರುವ ಒಟ್ಟು ಮಕ್ಕಳ ಸಂಖ್ಯೆಯನ್ನು ಗುರುತಿಸಿ ಕ್ರಮ ವಹಿಸಲಾಗುವುದು.

| ಎಸ್.ಸಿ.ಶಿವಮೂರ್ತಿ ಕ್ಷೇತ್ರಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

ಲಸಿಕೆ ವರದಾನ: ಅಂತಾರಾಜ್ಯ ಸಂಚಾರಕ್ಕೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಆದರೆ ಮಕ್ಕಳಿಗೆ ವ್ಯಾಕ್ಸಿನ್ ಕಡ್ಡಾಯಗೊಳಿಸದೆ ಇರುವುದು ಅವರನ್ನು ಕೂಲಿಗೆ ಕರೆದುಕೊಂಡು ಹೋಗಲು ಸುಲಭ ದಾರಿ ಮಾಡಿಕೊಟ್ಟಿದೆ. ತಮಗೆ ಗೊತ್ತಿರುವ ಮಾಲೀಕರ ಕಾಫಿ ತೋಟಕ್ಕೆ ಕರೆದುಕೊಂಡು ಹೋಗುವ ಏಜೆಂಟರ ಜಾಲ ಗುಂಡ್ಲುಪೇಟೆಯಲ್ಲಿ ಸಕ್ರಿಯ ವಾಗಿದೆ.

ಇದೇ ಮೊದಲಲ್ಲ: ಪ್ರತಿ ವರ್ಷ ಇದೇ ತಿಂಗಳಲ್ಲಿ ಇಲ್ಲಿನ ಕುಗ್ರಾಮಗಳ ಜನರು ಕೇರಳಕ್ಕೆ ಕೂಲಿಗೆ ಹೋಗುತ್ತಾರೆ. ಕಳೆದ ವರ್ಷ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಕೇರಳದ ಎಸ್ಟೇಟ್​ಗಳಿಗೆ ತೆರಳಿ ಪಾಲಕರ ಮನವೊಲಿಸಿ 40 ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಬಂದಿದ್ದರು. ಅವರಿಗಾಗಿ ಭೀಮನಬೀಡು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್ ಆರಂಭಿಸಲು ಉದ್ದೇಶಿಸಿದ್ದರು. ಆದರೆ ಪಾಲಕರು ಒಪ್ಪಿಗೆ ನೀಡದ ಪರಿಣಾಮ ಆ ಪ್ರಯತ್ನ ಕೈಬಿಡಲಾಗಿತ್ತು. 3 ತಿಂಗಳ ಬಳಿಕ ಅವರು ಶಾಲೆಗೆ ಸೇರಿದ್ದರು.

ಪಾಲಕರಿಗೂ ಅನಿವಾರ್ಯ: ಗುಂಡ್ಲು ನದಿ ಬತ್ತಿದ ನಂತರ ಸ್ಥಳೀಯರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಲಿಗಾಗಿ ಕೇರಳಕ್ಕೆ ವಲಸೆ ಹೋಗುತ್ತಿದ್ದಾರೆ. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರಿಲ್ಲದ್ದರಿಂದ ಅವರನ್ನೂ ಕರೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡಿದರೆ ದಿನಕ್ಕೆ 900ರಿಂದ 1500 ರೂ. ಸಿಗುತ್ತದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡಿದರೆ ಸಿಗುವ 298 ರೂ. ಕೇರಳದ ಕೂಲಿ ಮುಂದೆ ಏನೇನೂ ಅಲ್ಲ. ಹೀಗಾಗಿಯೇ ಇವರ ಕೇರಳ ಅಚ್ಚುಮೆಚ್ಚು.

ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಲು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಹೆಚ್ಚಿನ ಕೂಲಿ ಆಸೆಯಿಂದ ಕಾಫಿ ತೋಟಗಳಿಗೆ ತೆರಳುತ್ತಿದ್ದಾರೆ. ಈ ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ವಿಶೇಷ ಕಾರ್ಯಕ್ರಮ ನಡೆಸಿ ಅರಿವು ಮೂಡಿಸಲಾಗಿದೆ.

| ಶ್ರೀಕಂಠರಾಜೇ ಅರಸು ತಾಪಂ ಇಒ, ಗುಂಡ್ಲುಪೇಟೆ

 ಕುಟುಂಬ ಸಮೇತ ಕೇರಳಕ್ಕೆ ಹೋಗುವವರನ್ನೇ ಗುರುತಿಸಿ ಕೆಲಸ ನೀಡಲಾಗುತ್ತಿದೆ. ಒಮಿಕ್ರಾನ್ ಸೋಂಕು ಹರಡುವಿಕೆ ಭೀತಿಯ ಹಿನ್ನೆಲೆಯಲ್ಲಿ ಪಟ್ಟಣದಿಂದ ಕೇರಳಕ್ಕೆ ಸಾರಿಗೆ ಸಂಸ್ಥೆ ಬಸ್ ಸೇವೆ ಸ್ಥಗಿತಗೊಳಿಸಿದೆ. ಮೈಸೂರಿನಿಂದ ಎರಡು ಬಸ್​ಗಳು ಹಾಗೂ ಕೇರಳ ಸಾರಿಗೆ ಬಸ್​ಗಳು ಮಾತ್ರ ಸಂಚರಿಸುತ್ತಿದ್ದು, ಆ ಬಸ್​ಗಳನ್ನು ಹತ್ತಲು ಕೂಲಿಕಾರರು ಮುಗಿಬೀಳುತ್ತಿದ್ದಾರೆ. ಸಿಕ್ಕಸಿಕ್ಕ ಗೂಡ್ಸ್ ಆಟೋ, ಲಾರಿಗಳನ್ನು ಹತ್ತಿ ಎಸ್ಟೇಟ್​ಗಳಿಗೆ ತೆರಳುತ್ತಿರುವ ದೃಶ್ಯ ಪಟ್ಟಣದಲ್ಲಿ ಕಂಡುಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net