ಮಾರ್ಗಮಧ್ಯೆ ಕರೊನಾ ಸೋಂಕಿತೆಯನ್ನು ಅತ್ಯಾಚಾರ​ ಮಾಡಿದ ಆಂಬುಲೆನ್ಸ್​ ಚಾಲಕನಿಗೆ ಶಾಕ್​!

Ambulence Driver
Published on

ತಿರುವನಂತಪುರಂ: ಕರೊನಾ ಸೋಂಕಿತೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅತ್ಯಾಚಾರ ಎಸಗಿದ್ದ ಆಂಬುಲೆನ್ಸ್​ ಚಾಲಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಆಂಬುಲೆನ್ಸ್​ ಚಾಲಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಜಿವಿಕೆ ಇಎಂಆರ್​ಐ ಕಂಪನಿಯು ಅತ್ಯಾಚಾರ ಎಸಗಿದ ಕಾಯಂಕುಲಂ ಮೂಲದ ಆರೋಪಿ ನೌಫಾಲ್​ ವಿ ಎಂಬಾತನನ್ನು ಕೆಲಸದಿಂದ ತೆಗೆದುಹಾಕಿದೆ. ಗಂಭೀರವಾದ ದುಷ್ಕೃತ್ಯ ಎಸಗಿರುವುದಲ್ಲದೇ ಕಂಪನಿಯ ಹೆಸರಿಗೆ ಮಸಿ ಬಳಿದಿರುವುದರಿಂದ ಆರೋಪಿಯನ್ನು ಸೇವೆಯಿಂದ ವಜಾ ಮಾಡಿದೆ.

ಸಂತ್ರಸ್ತೆ ನೀಡಿದ ದೂರಿನ ಮೇಲೆ ಮತ್ತು ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ನಮ್ಮ ಕಂಪನಿಯ ಭಾಗವಾಗಿದ್ದುಕೊಂಡು ಕಂಪನಿಗೆ ಅಗೌರವ ತಂದಿದ್ದೀರಿ. ಕ್ರಿಮಿನಲ್​ ಪ್ರಕರಣದ ಅಡಿಯಲ್ಲಿ ನೀವು ಅಪರಾಧಿಯಾಗಿದ್ದೀರಿ. ಹೀಗಾಗಿ ನಿಮ್ಮನ್ನು ಸೇವೆಯಿಂದ ವಜಾ ಮಾಡಿದ್ದೇವೆಂದು ಪತ್ರದಲ್ಲಿ ಉಲ್ಲೇಖಿಸಿದೆ.

ಘಟನೆ ಹಿನ್ನೆಲೆ ಏನು?

ಕೇರಳದ ಪಟ್ಟಣಂತಿಟ್ಟ ಅರಣ್ಮುಲಾದಲ್ಲಿ ಈ ಘಟನೆ ಶನಿವಾರ ರಾತ್ರಿ ನಡೆದಿದ್ದು, ಅದೇ ದಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಇಬ್ಬರು ಯುವತಿಯನ್ನು ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರುತ್ತಿದ್ದ. ಒಬ್ಬಳನ್ನು ಒಂದು ಆಸ್ಪತ್ರೆಯ ಸಮೀಪ ಡ್ರಾಪ್‌ ಮಾಡಿದ್ದ. ಆದರೆ 19 ವರ್ಷದ ಯುವತಿಗೆ ಕರೊನಾ ಸೋಂಕು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡುವಂತೆ ಹೇಳಲಾಯಿತು.

ಆಕೆಯನ್ನು ಕರೆದುಕೊಂಡು ಹೋಗುವಾಗ ನೌಫಲ್‌, ಆಂಬುಲೆನ್ಸ್ ಅನ್ನು ನಿರ್ಜನ ಸ್ಥಳಕ್ಕೆ ಓಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ‍ಪಾಂಡಲಂ ಆಸ್ಪತ್ರೆಯಲ್ಲಿ ಇಳಿಸಿ ಹೋಗಿದ್ದ.

ಈ ಘಟನೆಯ ಕುರಿತು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಚಾಲಕನನ್ನು ಏಜೆನ್ಸಿಯೊಂದು ಹೈರ್​‌ ಮಾಡಿದೆ. ಆತನ ಪೂರ್ವಾಪರಗಳನ್ನು ತಿಳಿದುಕೊಳ್ಳದೇ ನೇಮಕ ಮಾಡಿಕೊಳ್ಳಲಾಗಿದೆಯೇ ಎಂಬ ಬಗ್ಗೆ ನಾವು ಮಾಹಿತಿ ಪಡೆಯುತ್ತಿದ್ದೇವೆ. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಮುಂದೆ ಎಚ್ಚರಿಕೆ ವಹಿಸಲಾಗುವುದು ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net