

ಉಪ್ಪಿನಂಗಡಿ: ಇಲ್ಲಿನ ಹಳೆಗೇಟು-ಮರ್ಧಾಳ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ರಸ್ತೆ ಮಧ್ಯೆ ಬೃಹತ್ ಹೊಂಡಗಳು ಬಾಯ್ದೆರೆದು ನಿಂತಿದ್ದು, ಇದರಿಂದಾಗಿ ವಾಹನ ಅಪಘಾತಗಳು ನಡೆಯುತ್ತಿರುವುದನ್ನು ಮನಗಂಡು ಸ್ಥಳೀಯ ಯುವಕರ ತಂಡವೊಂದು ರಸ್ತೆಯಲ್ಲಿದ್ದ ಗುಂಡಿಗೆ ಕಾಂಕ್ರೀಟ್ ಹಾಕಿ ರಸ್ತೆಯನ್ನು ಹೊಂಡ ಮುಕ್ತಗೊಳಿಸಿದೆ.
ಕೆಲ ವರ್ಷಗಳ ಹಿಂದೆಯಷ್ಟೇ ಈ ರಸ್ತೆಗೆ ಡಾಂಬರೀಕರಣ ನಡೆಸಲಾಗಿದ್ದರೂ ಕಾಮಗಾರಿ ಕಳಪೆಯಾಗಿ ನಡೆದಿರುವುದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣ ಆಗಿದ್ದವು. ಈ ಹೊಂಡಗಳಿಗೆ ವಾಹನಗಳು ಬಿದ್ದು, ಅಪಘಾತಗಳು ಸಂಭವಿಸುತ್ತಲೇ ಇತ್ತು. ಸಮಸ್ಯೆ ಅರಿತ ಸ್ಥಳೀಯ ಯುವಕರು ಅವರಿವರನ್ನು ಹೊಣೆಯಾಗಿಸದೆ, ತಾವೇ ಸ್ವತಃ ಖರ್ಚು ಭರಿಸಿ ರಸ್ತೆ ಗುಂಡಿಗೆ ಸಿಮೆಂಟ್ ಕಾಂಕ್ರೀಟ್ ಮಿಶ್ರಣ ಹಾಕಿ ಗುಂಡಿ ಮುಚ್ಚಿ ಇನ್ನಷ್ಟು ಮಂದಿ ಅಪಘಾತಕ್ಕಿಡಾಗುವುದನ್ನು ತಪ್ಪಿಸಿದ್ದಾರೆ.
ಸ್ಥಳೀಯ ನಿವಾಸಿ ವಾಸುದೇವ ಆಚಾರ್ಯ ಜಲ್ಲಿ, ಮರಳು ನೀಡಿದರೆ, ಯಾಸಿರ್ ಅರಾಫತ್ ಸಿಮೆಂಟ್ ಪ್ರಾಯೋಜಕತ್ವ ವಹಿಸಿದರು. ಸ್ಥಳೀಯ ಯುವಕರಾದ ಸೌಕತ್ ಜೇಡರಪೇಟೆ, ಇಬ್ರಾಹಿಂ ಆಕಿರೆ, ಕಿಲರ್, ಝುಬೈರ್, ಭವಾನಿ ಶಂಕರ್, ಹಂಝ ಬಡ್ಡಮೆ, ಸುಹೈಲ್ ಹೊಂಡವನ್ನು ಕಾಂಕ್ರೀಟ್ ಮಿಶ್ರಣಹಾಕಿ ಮುಚ್ಚುವ ಕಾರ್ಯದಲ್ಲಿ ಕೈ ಜೋಡಿಸಿದರು.