

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಿದ ದೆಹಲಿ ಸರ್ಕಾರದ ಗೃಹ ಸಚಿವ ಕೈಲಾಶ್ ಗೆಹ್ಲೋತ್ ಅವರು ಕೇಜ್ರಿವಾಲ್ ಅವರು ಆಧುನಿಕ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದ್ದಾರೆ.
ದೆಹಲಿಯ ಛತ್ರಸಾಲ್ ಸ್ಟೇಡಿಯಂನಲ್ಲಿ ಧ್ವಜಾರೋಹಣ ಸಭಾರಂಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ದೆಹಲಿ ಸರ್ಕಾರದ ಸಚಿವರೊಬ್ಬರು ಧ್ವಜಾರೋಹಣ ಮಾಡಿದ್ದು ಕಳೆದ 10 ವರ್ಷಗಳಲ್ಲಿ ಇದೇ ಮೊದಲು.
ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಗೆಹ್ಲೋತ್, ಇಂದು ನನಗೆ ತುಂಬಾ ಭಾವನಾತ್ಮಕ ದಿನವಾಗಿದೆ. ಅರವಿಂದ್ ಕೇಜ್ರಿವಾಲ್ ಆಧುನಿಕ ಸ್ವಾತಂತ್ರ್ಯ ಹೋರಾಟಗಾರ, ಅವರು ಜೈಲಿಗೆ ಹೋಗುವುದನ್ನು ಒಪ್ಪಿಕೊಂಡರು ಆದರೆ ತಲೆಬಾಗಲಿಲ್ಲ. ಇಂದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ದೇಶದ ಚುನಾಯಿತ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಅರವಿಂದರು ಜೈಲು ಪಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಚುನಾಯಿತ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಲು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಬದಲಿಗೆ, ದೇಶದಿಂದ ಬಡತನ, ನಿರುದ್ಯೋಗ ಮತ್ತು ಅನಕ್ಷರತೆಯನ್ನು ನಿರ್ಮೂಲನೆಗೆ ಸ್ವಾತಂತ್ರ್ಯ ಸಿಕ್ಕಿದೆ. ಈ ನ್ಯೂನ್ಯತೆಗಳಿಂದ ದೇಶವನ್ನು ಮುಕ್ತಿಗೊಳಿಸಲು ಕೇಜ್ರಿವಾಲ್ ಶ್ರಮಿಸಿದ್ದಾರೆ. ದೆಹಲಿಯ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ಉಚಿತ ವಿದ್ಯುತ್ ಮತ್ತು ಜನರ ಓಡಾಟಕ್ಕೆ ವಿಶ್ವ ದರ್ಜೆಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರನ್ನು ಪೊಲೀಸರು ಮಾರ್ಚ್ 21 ರಂದು ಬಂಧಿಸಿದ್ದರು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದಾರೆ.