

ಬೆಂಗಳೂರು: ಉಪ ಚುನಾವಣೆ ಘೋಷಣೆಗೂ ಮುನ್ನ ಚನ್ನಪಟ್ಟಣದ ಕದನ ಕೂತುಹಲ ನಿರೀಕ್ಷೆಗಳನ್ನು ಮೀರಿಸಿದ್ದು, ಚನ್ನಪಟ್ಟಣ ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ನೆಲಮಂಗಲದ ವೀರಭದ್ರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯ ಮಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಇತಿಹಾಸವಿರುವ ವೀರಭದ್ರ ಹಾಗೂ ರುದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.
ಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದೆ. ಶತಾಯಗತಾಯವಾಗಿ ಕ್ಷೇತ್ರ ಗೆಲ್ಲಲು ನಿರಂತರ ಪ್ರವಾಸ ಕೈಗೊಳ್ಳುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಇಂದೂ ಕೂಡಾ ಚನ್ನಪಟ್ಟಣದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಚನ್ನಪಟ್ಟಣದಲ್ಲಿ ಧ್ವಜಾರೋಹಣ ಸಂಬಂಧ ಮಾತನಾಡಿದ ಡಿಕೆಶಿ, ರಾಮನಗರದಲ್ಲೂ ಐದು ವರ್ಷ ಧ್ವಜಾರೋಹಣ ಮಾಡಿದ್ದೇನೆ. ಅಧಿಕಾರಿಗಳನ್ನ ಕೇಳಿದ್ದೆ, ಅವರು ಬಂದಿಲ್ಲ ಅಂದರು, ನಮ್ಮ ಡ್ಯೂಟಿ ನಾವು ಮಾಡಿದ್ದೇವೆ ಎಂದು ಹೇಳಿದರು. ಈ ಮೂಲಕ ಈ ಹಿಂದೆ 6 ವರ್ಷ ಕ್ಷೇತ್ರದ ಶಾಸಕರಾಗಿದ್ದ ಕೇಂದ್ರ ಸಚಿವ ಎಚ್ಡಿಕೆ ಒಂದು ಬಾರಿಯೂ ಕ್ಷೇತ್ರದಲ್ಲಿ ಧ್ವಜಾರೋಹಣ ಮಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಹೆಚ್ಡಿಕೆಗೆ ಟಕ್ಕರ್ ಕೊಟ್ಟರು.