ಕೀರ್ತಿಯಾಗಲಿ ಸೀತೆ!; ಅಭಿಮಾನಿಗಳಿಂದ ನಿರ್ದೇಶಕರಿಗೆ ಮನವಿ

Keerthy
Published on

ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ರಾಮಾಯಣ ಆಧರಿಸಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನಾಗಿ ಸೈಫ್ ಅಲಿಖಾನ್ ಈಗಾಗಲೇ ನಟಿಸುವುದು ಅಂತಿಮವಾಗಿದೆ. ಆದರೆ, ಈವರೆಗೂ ಚಿತ್ರಕ್ಕೆ ನಾಯಕಿ ಯಾರು ಎಂಬ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಹಲವು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿದ್ದರೂ, ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿಲ್ಲ.

ಈ ನಡುವೆ, ಕೀರ್ತಿ ಸುರೇಶ್ ಹೆಸರೂ ‘ಆದಿಪುರುಷ್’ ಸಿನಿಮಾಕ್ಕೆ ಅಂಟಿಕೊಂಡಿದೆ. ಈ ಹಿಂದೆ ಈ ಚಿತ್ರದಲ್ಲಿನ ಸೀತೆಯ ಪಾತ್ರಕ್ಕೆ ಕೃತಿ ಸನೋನ್, ಪೂಜಾ ಹೆಗ್ಡೆ ಸೇರಿ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು. ಇದೀಗ ಕೀರ್ತಿ ಸುರೇಶ್ ವಿಚಾರದಲ್ಲಿ ವಿಭಿನ್ನವಾದ ಬೆಳವಣಿಗೆ ಆಗಿದೆ. ಚಿತ್ರತಂಡವರಿಗಿಂತ ಮುಂಚೆ ಕೀರ್ತಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಕೀರ್ತಿ ಸುರೇಶ್ ಅವರೇ ಸೀತೆಯಾಗಲಿ ಎಂದು ಕೀರ್ತಿ ಅವರ ಒಂದಷ್ಟು ಫೋಟೋಗಳಿಗೆ ಸೀತೆಯ ಸ್ಪರ್ಷ ನೀಡಿ ಆ ಫೋಟೋಗಳನ್ನು ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವುತ್ ಅವರಿಗೆ ಟ್ವಿಟ್ ಮಾಡಿದ್ದಾರೆ. ಈ ಮೂಲಕ ಪ್ರಭಾಸ್​ಗೆ ಕೀರ್ತಿ ಅವರೇ ನಾಯಕಿಯಾಗಲಿ ಎಂದು ಬಯಸಿದ್ದಾರೆ. ಸದ್ಯ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 3ಡಿ ತಂತ್ರಜ್ಞಾನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಟಿ ಸೀರಿಸ್​ನ ಭೂಷಣ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net