ಕೇದಾರನಾಥ ಬಾಗಿಲು ತೆರೆದ ರಾವಲ್ ಶ್ರೀ ಭೀಮಾಶಂಕರಲಿಂಗ ಜಗದ್ಗುರುಗಳು

New Project
Published on

ಕೇದಾರನಾಥ, ಉತ್ತರಾಖಂಡ : ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯ ಪರ್ವತದಲ್ಲಿರುವ ಕೇದಾರನಾಥ ಮಂದಿರದ ಬಾಗಿಲು ಶುಕ್ರವಾರ ತೆರೆಯಲಾಗಿದ್ದು, ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಇದಕ್ಕೆ ಸಾಕ್ಷಿಯಾದರು.
ಕೇದಾರನಾಥನ ದೇವಾಲಯವು ಆರು ತಿಂಗಳು ತೆರೆದಿದ್ದರೆ ಇನ್ನಾರು ತಿಂಗಳು ಮುಚ್ಚಿರುತ್ತದೆ. ಈ ವೇಳೆ ಕೇದಾರನಾಥನ ಉತ್ಸವ ಮೂರ್ತಿಗೆ ಊಖಿಮಠದಲ್ಲಿ ಪೂಜೆ ನಡೆಯುತ್ತದೆ. ಹೀಗೆ ಬಾಗಿಲು ತೆರೆಯುವ ಮತ್ತು ಮುಚ್ಚುವ ಅಧಿಕಾರ ವೈರಾಗ್ಯ ಪೀಠದ ಜಗದ್ಗುರುಗಳಿಗಿದ್ದು, ಪರಂಪರೆಯಂತೆ ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಅಕ್ಷಯ ತೃತೀಯಾದ ಶುಭ ಮುಹೂರ್ತದಲ್ಲಿ ಬಾಗಿಲು ತೆರೆದು ಕೇದಾರನಾಥನಿಗೆ ಪ್ರಥಮ ಪೂಜೆ ನೆರವೇರಿಸಿದರು.
ಊಖಿಮಠದ ಗದ್ದಿಸ್ಥಾನದಲ್ಲಿ ಭೈರವನಾಥನ ಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಕೇದಾರನಾಥನ ಉತ್ಸವ ಮೂರ್ತಿಯ ಪಲ್ಲಕ್ಕಿಯು ಸಕಲ ಮಿಲಿಟರಿ ಬ್ಯಾಂಡ್ ಸಹಿತವಾಗಿ ಗುಪ್ತಕಾಶಿ, ಪಾಠಾ, ಗೌರಿಕುಂಡದ ಮೂಲಕ ಗುರುವಾರ ಕೇದಾರನಾಥ ಧಾಮವನ್ನು ತಲುಪಿತು.

ಸುದೀರ್ಘ ಪರಂಪರೆಯ ಅನಾವರಣ

ಬಾಗಿಲು ತೆರೆದು ಪೂಜೆ ಸಲ್ಲಿಸಿದ ಕೇದಾರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಕೇದಾರನಾಥ ಧಾಮದ ರಾವಲ್ ಪರಂಪರೆಯನ್ನು ವಿವರಿಸಿದರು. ಉತ್ತರಾಖಂಡದ ಪ್ರಸಿದ್ಧ ಇತಿಹಾಸಕಾರ ಹರಿಕೃಷ್ಣ ರಾಥೋಡಿ ಅವರು ಬರೆದಿರುವ ‘ಗಡವಾಲಿ ಕಾ ಇತಿಹಾಸ್’ ಪ್ರಕಾರ ವೈರಾಗ್ಯ ಪೀಠದ ಜಗದ್ಗುರುಗಳು ಕೇದಾರನಾಥ ರಾವಲ್‌ರಾಗಿದ್ದು, ಸಂಪೂರ್ಣ ಧಾರ್ಮಿಕ ಅಧಿಕಾರನವನ್ನು ಹೊಂದಿರುತ್ತಾರೆ. ಅವರಿಂದ ನೇಮಕವಾದ ಪೂಜಾರಿಗಳು 6 ತಿಂಗಳ ಪರ್ಯಂತ ನಿತ್ಯ ಪೂಜೆ ನಡೆಸುತ್ತಾರೆ. ಅದರಂತೆ ಈ ವರ್ಷ ಕೇದಾರನಾಥ ಪ್ರಧಾನ ಅರ್ಚಕರಾಗಿ ಶಿವಶಂಕರಲಿಂಗ ಅವರು ನೇಮಕಗೊಂಡಿದ್ದು ಮುಂದಿನ ಪೂಜೆ-ಪುನಸ್ಕಾರವನ್ನು ಅವರು ನಡೆಸಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶದ ದ್ರಾಕ್ಷಾರಾಮ ಕ್ಷೇತ್ರದ ಭೀಮನಾಥ ಲಿಂಗದಿಂದ ಅಕ್ಷಯ ತೃತೀಯಾದಂತು ಆವಿರ್ಭವಿಸಿದ ಶ್ರೀಜಗದ್ಗುರು ಏಕೋರಾಮರಾಧ್ಯರು ಹಿಮಾಲಯದಲ್ಲಿ ವೈರಾಗ್ಯ ಪೀಠವನ್ನು ಸ್ಥಾಪಿಸಿದ್ದು, ಅವರ ಜಯಂತಿಯನ್ನು ಸಹ ಶುಕ್ರವಾರ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net