ಸೋಲಾರ್ ದಾರಿದೀಪ ವ್ಯವಸ್ಥೆ ಬೇಡ! : ಕೆದಂಬಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಒತ್ತಾಯ : ವಿವಿಧ ಬೇಡಿಕೆಗಳ ಪ್ರಸ್ತಾಪ

New Project (8)
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಸೋಲಾರ್‌ನಿಂದ ಕಾರ್ಯನಿರ್ವಹಿಸುವ ಬೀದಿದೀಪಗಳು ಮತ್ತು ಸಿಸಿ ಕ್ಯಾಮರಾಗಳು ಒಂದೇ ಷರ್ಷದಲ್ಲಿ ಕೆಟ್ಟು ಹೋಗುತ್ತಿರುವುದರಿಂದ ಇನ್ನು ಮುಂದೆ ಅಳವಡಿಸುವುದು ಬೇಡವೇ ಬೇಡ ಎಂದು ಕೆದಂಬಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.

ಅಧ್ಯಕ್ಷೆ ಸುಜಾತಾ ಮುಳಿಗದ್ದೆ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಸುರೇಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ನಾರಾಯಣ ಪೂಜಾರಿ ಕುರಿಕ್ಕಾರ, ಸಾವಿರಾರು ರೂ. ಖರ್ಚು ಮಾಡಿ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾದರೂ ಒಂದೇ ವರ್ಷದೊಳಗೆ ಕೆಟ್ಟು ಹೋಗುತ್ತಿವೆ. ಹೆಚ್ಚಾಗಿ ಬ್ಯಾಟರಿ ಸಮಸ್ಯೆಗಳೇ ಬರುತ್ತಿರುವುದರಿಂದ ಸೋಲಾರ್ ದೀಪ, ಸಿಸಿ ಕ್ಯಾಮರಾಗಳಿಗೆ ಖರ್ಚು ಮಾಡುವುದು ವ್ಯರ್ಥ. ಹಾಗಾಗಿ ಸೋಲಾರ್‌ನಿಂದ ಕಾರ್ಯನಿರ್ವಹಿಸುವ ಬೀದಿದೀಪ ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು ಬೇಡ ಎಂದರು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪಿಡಿಒ ಅಜಿತ್ ಜಿ.ಕೆ. ತಿಳಿಸಿದರು.

ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು, ಸದಸ್ಯರಾದ ವಿಠಲ ರೈ ಮಿತ್ತೋಡಿ, ಕೃಷ್ಣಕುಮಾರ್ ಇದ್ಯಪೆ, ಮೆಲ್ವಿನ್ ಮೊಂತೆರೋ, ಸುಜಾತಾ ರೈ, ಅಸ್ಮಾ ಗಟ್ಟಮನೆ, ರೇವತಿ ಬೋಳೋಡಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಕೃಷಿಕ ಮೋಹನ ಆಳ್ವ ಮುಂಡಾಳ ಉಪಸ್ಥಿತರಿದ್ದರು. ಪ್ರಭಾರ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ನಿರ್ಣಯ ದಾಖಲಿಸಿಕೊಂಡರು.

ನೆಟ್‌ವರ್ಕ್ ಸಮಸ್ಯೆ

ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ, ಬಾಣಂತಿಯರಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶ ವಿತರಣೆ ಮಾಡಲಾಗುತ್ತಿದ್ದು, ಈ ಸಂದರ್ಭ ಫೇಸ್ ಕ್ಯಾಪ್ಚರ್ ಫೋಟೋ ದಾಖಲೆಯನ್ನು ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಕೆಲವೊಂದು ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಇದು ಕಷ್ಟವಾಗುತ್ತಿದ್ದು, ದಿನವಿಡೀ ಇದೇ ಕೆಲಸದಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಪರಿಪೂರ್ಣ ಶಿಕ್ಷಣ ನೀಡಲು ಕಷ್ಟವಾಗುತ್ತಿದೆ ಎಂಬ ವಿಚಾರವನ್ನು ಅಂಗನವಾಡಿ ಶಿಕ್ಷಕಿ ತಾರಾ ಬಲ್ಲಾಳ್ ಪ್ರಸ್ತಾಪಿಸಿದರು. ಕೆದಂಬಾಡಿ ಗ್ರಾಮ ವ್ಯಾಪ್ತಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಕುರಿತು ಈಗಾಗಲೇ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಪಂಚಾಯಿತಿ ಸದಸ್ಯ ರತನ್ ರೈ ಕುಂಬ್ರ ತಿಳಿಸಿದರು.

ಗ್ರಾಮಸ್ಥರಿಂದ ವಿವಿಧ ಬೇಡಿಕೆ

ಕೆಯ್ಯೂರು ಭಾಗದಲ್ಲಿ ಕೃಷಿ ಹಾನಿ ಮಾಡುತ್ತಿರುವ ಕಾಡಾನೆ ಮುಂದಿನ ದಿನಗಳಲ್ಲಿ ಕೆದಂಬಾಡಿ ಗ್ರಾಮಕ್ಕೂ ಕಾಲಿಡುವ ಸಾಧ್ಯತೆ ಹೆಚ್ಚಾಗಿದ್ದು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಗ್ರಾಮದಲ್ಲಿ ಪೊಲೀಸ್ ಜನಸಂಪರ್ಕ ಸಭೆ ನಡೆಸಬೇಕು. ರಾತ್ರಿ ವೇಳೆ ಬೀಟ್ ಪೊಲೀಸರು ಗಸ್ತು ತಿರುಗಬೇಕು. ಬೇರೆ ಬೇರೆ ಜಾತಿಯ ಮರದ ಗಿಡಗಳನ್ನು ವಿತರಣೆ ಮಾಡುತ್ತಿರುವ ಅರಣ್ಯ ಇಲಾಖೆಯವರು ದೂಪದ ಮರದ(ಹಾಲು ಮಡ್ಡಿ) ಗಿಡಗಳನ್ನು ಒದಗಿಸಬೇಕು. ಕುಡಿಯುವ ನೀರು, ದಾರಿದೀಪ ನಿರ್ವಹಣೆಗಾಗಿ ಸರ್ಕಾರ ಗ್ರಾಪಂಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು ಎಂಬ ಆಗ್ರಹಗಳು ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net