

ಸುಬ್ರಹ್ಮಣ್ಯ: ಕೊಲ್ಲಮೊಗ್ರು ಗ್ರಾಮದಲ್ಲಿ ಕಾಡುತ್ತಿದ್ದ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಪರಿಹಾರವಾಗಿದ್ದು, ಟವರ್ನ ಪವರ್ ಸಪ್ಲೈನ ಜನರೇಟರ್ಗೆ ಹೊಸ ಬ್ಯಾಟರಿ ಅಳವಡಿಸಲಾಗಿದೆ. ಡೈನಮ್ ಸರಿಪಡಿಸಲಾಗಿದೆ.
ಕೆಲ ಸಮಯದ ಹಿಂದೆ ಕೊಲ್ಲಮೊಗ್ರು ಬಿಎಸ್ಎನ್ಎಲ್ ಟವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ನೆಟ್ವರ್ಕ್ ಸಮಸ್ಯೆ ಉಂಟಾಗಿತ್ತು. ಜನರೇಟರ್ಗೆ ಹೊಸ ಬ್ಯಾಟರಿ ಅಳವಡಿಸಬೇಕಾಗಿತ್ತು. ಈ ಬಗ್ಗೆ ಬಿಎಸ್ಎನ್ಎಲ್ ಸಂಸ್ಥೆಗೆ ತಿಳಿಸಿದ್ದರೂ ಹೊಸ ಬ್ಯಾಟರಿ ಅಳವಡಿಸಿರಲಿಲ್ಲ. ಕೊನೆಗೆ ಕೊಲ್ಲಮೊಗ್ರು ಗ್ರಾಪಂ ಉಪಾಧ್ಯಕ್ಷ ಮಾಧವ ಚಾಂತಾಳ ತನ್ನ ಸದಸ್ಯತ್ವ ಗೌರವಧನದಿಂದ ಬಿಎಸ್ಎನ್ಎಲ್ ಟವರ್ಗೆ ಹೊಸ ಬ್ಯಾಟರಿ ನೀಡಿದ್ದರು. ಜತೆಗೆ ಡೈನಮ್ ಕೂಡ ಹಾಳಾಗಿದ್ದರಿಂದ ಅದನ್ನು ಸರಿಪಡಿಸಲಾಗಿದ್ದು, ಅದರ ವೆಚ್ಚವನ್ನು ಕೊಲ್ಲಮೊಗ್ರು ಗ್ರಾಪಂ ಅಧ್ಯಕ್ಷೆ ಮೋಹಿನಿ ಕಟ್ಟ ನೀಡಿ ಸಹಕರಿಸಿದ್ದರು. ಇದರಿಂದ ಟವರ್ನ ಪವರ್ ಸಪ್ಲೈ ಬ್ಯಾಕಪ್ ಬ್ಯಾಟರಿ ಸಮಸ್ಯೆ ಪರಿಹಾರಗೊಂಡಿದೆ. ಉದಯ ಶಿವಾಲ ನೇತೃತ್ವದಲ್ಲಿ ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಮತ್ತಿತರರ ಸಹಕಾರದಲ್ಲಿ ನೆಟ್ವರ್ಕ್ ಸಮಸ್ಯೆ ಸರಿಪಡಿಸಲು ಶ್ರಮವಹಿಸಿದ್ದರು.