ಈ ಕ್ರಿಕೆಟಿಗರನ್ನು ಐಪಿಎಲ್​ನಿಂದಲೇ ಬ್ಯಾನ್​ ಮಾಡಿ! ಬಿಸಿಸಿಐಗೆ ಕಾವ್ಯಾ ಮಾರನ್​ ಮನವಿ

Kavya Maran
Published on

ನವದೆಹಲಿ: ಐಪಿಎಲ್​​ ಮೆಗಾ ಹರಾಜಿಗೆ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೆಗಾ ಹರಾಜಿಗೆ ಕೆಲವು ನಿಯಮಗಳನ್ನು ಅಂತಿಮಗೊಳಿಸಲು ಬಿಸಿಸಿಐ ಬುಧವಾರ ಮುಂಬೈನಲ್ಲಿ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಮಹತ್ವದ ಸಭೆ ನಡೆಸಿತು. ಎಲ್ಲ ಫ್ರಾಂಚೈಸಿಯ ಮಾಲೀಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಎಲ್ಲ ತಂಡದ ಮಾಲೀಕರು ಸಭೆಯಲ್ಲಿ ಒಮ್ಮತವನ್ನು ವ್ಯಕ್ತಪಡಿಸಲಿಲ್ಲ. ಬದಲಾಗಿ ಬಿಸಿಸಿಐ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟರು. ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ತಂಡದ ಮಾಲಕಿ ಕಾವ್ಯಾ ಮಾರನ್, ಬಿಸಿಸಿಐಗೆ ಕೆಲವು ಸಲಹೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ.

ಮುಂದಿನ ಐಪಿಎಲ್‌ನಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಬೇಕು. ಕೇವಲ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ನಿಯಮವನ್ನು ಕೈಬಿಟ್ಟು 7 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಇದರಲ್ಲಿ ವಿದೇಶಿ, ಭಾರತೀಯ ಮತ್ತು ಅನ್​ಕ್ಯಾಪ್ಡ್​ ಆಟಗಾರರ ಮೇಲೆ ಯಾವುದೇ ಮಿತಿ ಇರಬಾರದು. ಆಟಗಾರರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲು ಅವಕಾಶವಿರಬೇಕು ಮತ್ತು ಐದು ವರ್ಷಗಳಿಗೆ ಒಮ್ಮೆ ಮೆಗಾ ಹರಾಜು ನಡೆಯಬೇಕು ಎಂಬ ಶಿಫಾರಸುಗಳನ್ನು ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಮುಖ ವಿಚಾರವನ್ನು ಪ್ರಸ್ತಾಪ ಮಾಡಿದ ಕಾವ್ಯಾ ಮಾರನ್​, ಹರಾಜಿನಲ್ಲಿ ಖರೀದಿಸಿದ ನಂತರ ಗಾಯವಲ್ಲದ ಕಾರಣಕ್ಕಾಗಿ ಐಪಿಎಲ್‌ನಿಂದ ಹಿಂದೆ ಸರಿಯುವ ವಿದೇಶಿ ಆಟಗಾರರನ್ನು ಬ್ಯಾನ್​ ಮಾಡಬೇಕೆಂದು ಕಾವ್ಯಾ ಮಾರನ್ ಆಗ್ರಹಿಸಿದ್ದಾರೆ.

ಸಭೆಯ ನಂತರ ಕ್ರಿಕ್‌ಬಜ್‌ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾವ್ಯಾ ಮಾರನ್ ಐಪಿಎಲ್ ಮೆಗಾ ಹರಾಜು ನಡೆಸುವ ವಿರುದ್ಧ ಮಾತನಾಡಿದರು. ಒಂದು ತಂಡವನ್ನು ಕಟ್ಟಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಕಿರಿಯ ಆಟಗಾರರು ತಯಾರಾಗಲು ಸ್ವಲ್ಪ ಸಮಯ ಮತ್ತು ಹೂಡಿಕೆಯನ್ನು ತೆಗೆದುಕೊಳ್ಳುತ್ತದೆ. ನಮ್ಮ ತಂಡದ ಅಭಿಷೇಕ್​ ಶರ್ಮ ಅವರು ಸ್ಥಿರ ಪ್ರದರ್ಶನ ನೀಡಲು ಮೂರು ವರ್ಷ ಸಮಯ ತೆಗೆದುಕೊಳ್ಳಬೇಕಾಯಿತು. ಇತರ ತಂಡಗಳಲ್ಲಿಯೂ ಇಂತಹ ಅನೇಕ ಉದಾಹರಣೆಗಳಿವೆ ಎಂದು ಕಾವ್ಯಾ ಹೇಳಿದರು.

ಅಂದಹಾಗೆ ಬಿಸಿಸಿಐ ಬುಧವಾರ ಸಂಜೆ ಎಲ್ಲ ಐಪಿಎಲ್​ ಫ್ರಾಂಚೈಸಿ ಮಾಲೀಕರ ಸಭೆಯನ್ನು ಮುಂಬೈನ ಮುಖ್ಯ ಕಚೇರಿಯಲ್ಲಿ ಕರೆದಿತ್ತು. ಈ ವೇಳೆ ಮೆಹಾ ಹರಾಜು, ಆಟಗಾರರನ್ನು ಉಳಿಸಿಕೊಳ್ಳುವುದು ಮತ್ತು ಇಂಪ್ಯಾಕ್ಟ್​ ಪ್ಲೇಯರ್​ ನಿಯಮ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಈ ವೇಳೆ ಚರ್ಚಿಸಲಾಗಿದೆ. ಫ್ರಾಂಚೈಸ್ ಮಾಲೀಕರು ಆಟಗಾರರ ನಿಯಮಗಳು, ವ್ಯಾಪಾರೀಕರಣ, ಲೈಸೆನ್ಸ್​ ಮತ್ತು ಗೇಮಿಂಗ್ ಸೇರಿದಂತೆ ಇತರ ವಾಣಿಜ್ಯ ಅಂಶಗಳ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆಂದು ತಿಳಿದುಬಂದಿದೆ.

ಐಪಿಎಲ್ ಆಟಗಾರರ ನಿಯಮಗಳನ್ನು ರೂಪಿಸುವ ಮೊದಲು ಬಿಸಿಸಿಐ ಈ ಶಿಫಾರಸುಗಳನ್ನು ಐಪಿಎಲ್ ಆಡಳಿತ ಮಂಡಳಿಗೆ ಹೆಚ್ಚಿನ ಚರ್ಚೆ ಮತ್ತು ಮೌಲ್ಯಮಾಪನಕ್ಕಾಗಿ ತೆಗೆದುಕೊಳ್ಳುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಷಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net