ಕಾವೇರಿ ವಿವಾದಕ್ಕೆ ರಾಜಕೀಯ ಕೆಸರು: ಬೊಮ್ಮಾಯಿ-ಡಿಕೆಶಿ ನಡುವೆ ತೀವ್ರ ಜಟಾಪಟಿ; ಮಂಡ್ಯದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ

Kaveri
Published on

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಷಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ನಡುವೆ ರಾಜಕೀಯ ತಿಕ್ಕಾಟದ ಸರಕಾಗಿದೆ. ಇನ್ನೊಂದೆಡೆ ಮಂಡ್ಯದಲ್ಲಿ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ಮುಂದುವರಿಸಿವೆ. ನ್ಯಾಯಾಲಯದಲ್ಲಿರುವ ಜಲ ವಿವಾದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕೆಂಬ ದಾಳವನ್ನು ಕಾಂಗ್ರೆಸ್ ಉರುಳಿಸಿದೆ. ಪ್ರತಿಯಾಗಿ, ಜಲಾಶಯದಿಂದ ನೀರು ಬಿಡುಗಡೆ ಮಾಡಬಾರದು ಎಂಬ ವಾದ ಮುಂದಿಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಜೆಡಿಎಸ್ ನಾಯಕರೂ ತಮ್ಮ ಅನುಭವದ ಮಾತುಗಳಿಂದ ಜನಾಭಿಪ್ರಾಯ ರೂಪಿಸಲು ಮುಂದಾಗಿದ್ದಾರೆ.

ನೀರು ಬಿಡಲು ನಾವು ತಯಾರಿಲ್ಲ. ಹೀಗಾಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ನ್ಯಾಯಲಯದ ಹೊರಗಡೆ ಇತ್ಯರ್ಥ ಮಾಡಿಕೊಳ್ಳಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿರುವ ಸಲಹೆ ಸ್ವೀಕಾರ್ಹವಾಗಿದೆ ಎಂದರು. ನೀರಾವರಿ ಸಚಿವರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಪಯುಕ್ತ ಸಲಹೆ ನೀಡಲಿ. ಅವರೇ ನೇಮಕ ಮಾಡಿದ ಕಾನೂನು ತಜ್ಞರೇ ಈಗಲೂ ಇದ್ದಾರೆ. ಅವರ ಮಾತನ್ನು ಕೇಳಬೇಕೋ ಅಥವಾ ಇವರ ಮಾತನ್ನು ಕೇಳಬೇಕೋ? ಒಳ್ಳೆ ಸಲಹೆ ನೀಡಿದರೆ ಮಾತ್ರ ಅವರ ಮಾತನ್ನು ಕೇಳುತ್ತೇವೆ ಎಂದರು. ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರ ಸೆ.12ರ ನಂತರ ತಮಿಳುನಾಡಿಗೆ ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಂದೆ ಅಫಿಡೆವಿಟ್ ಹಾಕಿದೆ. ಅದಕ್ಕೆ ತಾವು ಬದ್ಧರಾಗಿರಬೇಕಲ್ಲ. ಸರ್ಕಾರದ ಅಫಿಡೆವಿಟ್ ಅಂದರೆ ಸುಮ್ಮನೆ ಅಲ್ಲ. ರಾಜ್ಯ ಸರ್ಕಾರ ಸುಪ್ರಿಂಕೋರ್ಟ್ ಮುಂದೆ ತಾನೇ ಸುಳ್ಳು ಹೇಳುತ್ತಿದೆ ಎಂದಾಯಿತು ಎಂದು ಅಭಿಪ್ರಾಯಪಟ್ಟರು.

ತಮಿಳುನಾಡಿಗೆ ಹರಿದ ನೀರು

ಮಂಡ್ಯ: ತೀವ್ರ ವಿರೋಧದ ನಡುವೆಯೂ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಸೋಮವಾರ ತಡರಾತ್ರಿಯಿಂದ ತಮಿಳುನಾಡಿಗೆ ಕೆಆರ್​ಎಸ್ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಇದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ಮಂಡ್ಯ, ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪ್ರಾಧಿಕಾರದ ಸೂಚನೆ ಮೇರೆಗೆ ಕೆಆರ್​ಎಸ್ ಮತ್ತು ಕಬಿನಿ ಡ್ಯಾಂನಿಂದ ತಮಿಳುನಾಡಿಗೆ ಒಟ್ಟು 2,898 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಕೆಆರ್​ಎಸ್​ನಿಂದ 1,235 ಹಾಗೂ ಕಬಿನಿ ಜಲಾಶಯದಿಂದ 1,663 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಉಳಿದಂತೆ 1,166 ಕ್ಯೂಸೆಕ್ ಮಳೆಯ ನೀರು ಕೂಡ ತ.ನಾಡು ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿ ಸರಣಿ ಪ್ರತಿಭಟನೆ ನಡೆದವು.

ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಬಿಜೆಪಿಯವರಿಗೆ ತಮ್ಮದೇ ಪ್ರಧಾನಮಂತ್ರಿ ಭೇಟಿ ಮಾಡಿಸಲು ಏಕೆ ಸಾಧ್ಯವಾಗುತ್ತಿಲ್ಲ? ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಬಿಜೆಪಿಯ ಇತರ ಸಂಸದರು ಸೇರಿ ಪ್ರಧಾನಿ ಜತೆ ಚರ್ಚೆಗೆ ಸಮಯ ನಿಗದಿಪಡಿಸಲು ಮುಂದಾಗಬೇಕು. | ಎಂ.ಬಿ. ಪಾಟೀಲ, ಸಚಿವ ಪ್ರಾಧಿಕಾರ ನೀರು ಬಿಡಿ ಎಂದು ಸೂಚನೆ ನೀಡಿದಾಕ್ಷಣ ರಾಜ್ಯ ಸರ್ಕಾರ ಸುಪ್ರಿಂಗೆ ತುರ್ತು ಅರ್ಜಿ ಸಲ್ಲಿಸಬೇಕಿತ್ತು. ಬದಲಿಗೆ ನೀರು ಬಿಡುವ ವಿಚಾರದಲ್ಲಿ ಆತುರ ಮಾಡಿದ್ದೇಕೆ? ತಮಿಳು ನಾಡು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಮಾಡುವ ಕೆಲಸ ಮಾಡುತ್ತಲೇ ಇದೆ. | ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು. ಅಂತೆಯೇ ಸಿಎಂ, ಡಿಸಿಎಂ ಮತ್ತು ನಾವು ದೆಹಲಿಗೆ ಹೋಗುತ್ತಿದ್ದೇವೆ. | ಎನ್.ಚಲುವರಾಯಸ್ವಾಮಿ ಸಚಿವ

ಬೊಮ್ಮಾಯಿ ವಾದ

  • ಅವರನ್ನು ನಾನು ಇಕ್ಕಟ್ಟಿಗೆ ಸಿಲುಕಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಕ್ಕಟ್ಟಿಗೆ ಸಿಲುಕಿಸುವುದರಿಂದ ನನಗೇನು ಆಗುವುದಿಲ್ಲ. ಅದರ ಅಗತ್ಯ ನನಗಿಲ್ಲ.
  • ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೇಲಿಂದ ಮೇಲೆ ತಪ್ಪು ಮಾಡುವ ಮೂಲಕ ರಾಜ್ಯದ ಜನತೆಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.
  • ಸಿಡಬ್ಲ್ಯುಎಂಎ ಆದೇಶದಂತೆ ನೀರು ಬಿಡುವುದಾದರೆ ಸುಪ್ರೀಂ ಕೋರ್ಟ್​ನಲ್ಲಿ ವಾದ ಮಾಡಲು ಏನಿದೆ? ಸರ್ಕಾರದ ನಡೆ ರಾಜ್ಯದ ರೈತರನ್ನು, ಕಾವೇರಿ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಡಿಕೆಶಿ ಹೇಳಿದ್ದೇನು?

  • ಕಾವೇರಿ ನೀರು ವಿಚಾರವಾಗಿ ಸುಪ್ರೀಂಕೋರ್ಟಿನಲ್ಲಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲಹೆಯನ್ನು ಬೊಮ್ಮಾಯಿ ನೀಡುತ್ತಿದ್ದಾರೆ.
  • ಬೊಮ್ಮಾಯಿ ಕಾಲದಲ್ಲಿ ಎಷ್ಟು ನೀರು ಬಿಟ್ಟಿದ್ದರು ಎನ್ನುವ ದಾಖಲೆಗಳು ನಮ್ಮ ಬಳಿ ಇವೆ. ಆದರೆ ನಾವು ಸುಪ್ರೀಂಕೋರ್ಟ್ ಅನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.
  • ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಕೋರ್ಟ್ ತೀರ್ಪು ನೀಡಿದರೆ, ನನ್ನ ಬಳಿ ಯಾವ ಆಯ್ಕೆ ಇದೆ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net